2 ಲಕ್ಷ ರೂ. ಮೀರಿದ ನಗದು ವಹಿವಾಟು ನಡೆಸುವವರಿಗೆ ಆದಾಯ ತೆರಿಗೆ ಇಲಾಖೆ ವಾರ್ನಿಂಗ್

Update: 2017-08-29 07:57 GMT

ಹೊಸದಿಲ್ಲಿ,ಆ.29 : ಎರಡು ಲಕ್ಷಕ್ಕೂ  ಮೀರಿದ ನಗದು ವ್ಯವಹಾರ ನಡೆಸುವವರಿಗೆ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದ್ದು ಈ ಬಗೆಗಿನ ನಿಯಮವನ್ನು ಮೀರಿದ್ದೇ ಆದಲ್ಲಿ ಕಾನೂನು ಪ್ರಕಾರ  ದಂಡ ವಿಧಿಸಲಾಗುವುದು ಎಂದು ಹೇಳಿದೆ.

ಒಂದು ದಿನದ ಅವಧಿಯಲ್ಲಿ ಒಬ್ಬನೇ ವ್ಯಕ್ತಿಯಿಂದ ಎರಡು ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣ ಪಡೆಯುವುದನ್ನು ನಿಷೇಧಿಸಲಾಗಿದೆ ಎಂದು  ಹೇಳಿರುವ ಆದಾಯ ತೆರಿಗೆ ಇಲಾಖೆ ``ಅಂತೆಯೇ ಸ್ಥಿರಾಸ್ತಿ ವರ್ಗಾವಣೆಗೆ ರೂ 20,000ಕ್ಕಿಂತಲೂ ಅಧಿಕ ನಗದು ಪಾವತಿಸುವುದು ಯಾ ಪಡೆಯುವುದು  ಹಾಗೂ  ಉದ್ಯಮ ಯಾ ವೃತ್ತಿಗೆ ಸಂಬಂಧಿಸಿದಂತೆ ರೂ 10,000ಕ್ಕೂ ಅಧಿಕ ಮೊತ್ತದ ನಗದು ವ್ಯವಹಾರಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ.

``ನಗದು ಪಾವತಿ ನಿಷೇಧಿಸಲಾಗಿದೆ ! ಉಲ್ಲಂಘನೆಗಾಗಿ ದಂಡ ಹೇರಬೇಕಾದೀತು ?ಗೋ ಕ್ಯಾಶ್ ಲೆಸ್. ಗೋ ಕ್ಲೀನ್'' ಎಂದು ಐಟಿ ಇಲಾಖೆಯ ಸಂದೇಶ ತಿಳಿಸಿದೆ.

ಈ ಮೇಲಿನ ನಿಯಮಗಳ ಉಲ್ಲಂಘನೆಯ ಪ್ರಕರಣಗಳನ್ನು ತಿಳಿದಿರುವವರು ತಮ್ಮ ವ್ಯಾಪ್ತಿಯ ಐಟಿ ಇಲಾಖೆಯ ಮುಖ್ಯ ಆಯುಕ್ತರಿಗೆ ಮಾಹಿತಿ ನೀಡಬಹುದು  ಯಾ ಬ್ಲ್ಯಾಕ್‍ಮನಿಇನ್ಫೋ@ಇನ್‍ಕಂ ಟ್ಯಾಕ್ಸ್.ಗವ್.ಇನ್  ಈ ವಿಳಾಸಕ್ಕೆ ಇ-ಮೇಲ್ ಮಾಡಬಹುದೆಂದು ತಿಳಿಸಲಾಗಿದೆ.

ಹಣಕಾಸು ಕಾಯಿದೆ 2017ರ ಅನ್ವಯ ಎಪ್ರಿಲ್ 1, 2017ಕ್ಕೆ ಅನ್ವಯವಾಗುವಂತೆ ಕೇಂದ್ರ ಸರಕಾರ ಎರಡು ಲಕ್ಷಕ್ಕಿಂತ ಅಧಿಕ ನಗದು ವ್ಯವಹಾರಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಐಟಿ ಕಾಯಿದೆಗೆ ಹೊಸದಾಗಿ ಸೇರಿಸಲಾದ 269ಎಸ್‍ಟಿ ಅನ್ವಯ ಎರಡು ಲಕ್ಷಕ್ಕಿಂತ ಅಧಿಕ ನಗದು ವ್ಯವಹಾರವನ್ನು ಒಂದೇ ದಿನದಲ್ಲಿ  ನಡೆಸುವುದನ್ನು ನಿಷೇಧಿಸಲಾಗಿದೆ. ಇದರ ಉಲ್ಲಂಘನೆ ನಡೆಸಿದವರು ಶೇ 100ರಷ್ಟು ದಂಡ ಪಾವತಿಸಬೇಕಾಗುವುದೆಂದೂ ಇಲಾಖೆ ತಿಳಿಸಿತ್ತು. ಆದರೆ ಸರಕಾರ, ಬ್ಯಾಂಕುಗಳು,  ಪೋಸ್ಟ್ ಆಫೀಸುಗಳು ಯಾ ಸಹಕಾರಿ ಬ್ಯಾಂಕುಗಳಿಂದ ಸ್ವೀಕೃತವಾಗುವ ಹಣಕ್ಕೆ ಈ ನಿಯಮ ಅನ್ವಯವಾಗುವುದಿಲ್ಲವೆಂದೂ ತಿಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News