ಲೆಕ್ಕಪರಿಶೋಧನೆಯ ಸವಾಲುಗಳು ಎದುರಿಸಲು ಸಿದ್ಧ: ಶಶಿಕಾಂತ್ ಶರ್ಮ
ಬೆಂಗಳೂರು, ಆ.30: ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ(ಸಿಎಜಿ) ಗಣಕೀಕೃತ ರಾಜಸ್ವ ಲೆಕ್ಕಪರಿಶೋಧನಾ ಶ್ರೇಷ್ಠತೆಯ ಕೇಂದ್ರವು (ಸದಾರ್) ರಾಜಸ್ವ ಲೆಕ್ಕಪರಿಶೋಧನೆಯ ಕ್ಷೇತ್ರದಲ್ಲಿ ಇಲಾಖೆಯನ್ನು ಗಣಕ ಯುಗಕ್ಕೆ ಕೊಂಡೊಯ್ಯುವಲ್ಲಿ ಪ್ರಧಾನ ಪಾತ್ರ ನಿರ್ವಹಿಸಲಿದೆ ಎಂದು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕ ಶಶಿಕಾಂತ್ ಶರ್ಮ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ಕಚೇರಿಯ ನೂತನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಉದ್ದೇಶಿತ ಕ್ರಮವು, ಸರಕಾರಿ ಲೆಕ್ಕಪರಿಶೋಧನೆಯಲ್ಲಿ ಗಣಕೀಕೃತ ಲೆಕ್ಕಪರಿಶೋಧನೆಯನ್ನು ಕೈಗೊಳ್ಳುವಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯತ್ತ ಕೊಂಡೊಯ್ಯುವುದು ಎಂದು ಅಭಿಪ್ರಾಯಪಟ್ಟರು.
ಹಲವಾರು ದತ್ತ ಮೂಲಗಳನ್ನು ಕ್ರೋಢೀಕರಿಸುವ ಒಂದು ಕೇಂದ್ರೀಯ ದತ್ತ ಭಂಡಾರದ ಸಂಗ್ರಹಣೆಯ ಉದ್ದೇಶದೊಂದಿಗೆ ಹೊಸ ವಿಧಿ ವಿಧಾನಗಳನ್ನು ನಿರೂಪಿಸಲು ಮತ್ತು ವಿವಿಧ ದತ್ತ ಮೂಲಗಳ ವಿಶ್ಲೇಷಣೆಗೆ ನಿರ್ದಿಷ್ಟ ಮಾದರಿಗಳನ್ನು ಅಭಿವೃದ್ಧಿಪಡಿಸಲು ಸ್ಥಾಪನೆ ಮಾಲಾಗಿದೆ ಎಂದು ಹೇಳಿದರು.
ಒಂದು ಗಣಕೀಕೃತ ಪರಿಸರದಲ್ಲಿ ರಾಜಸ್ವ ಲೆಕ್ಕ ಪರಿಶೋಧನೆಯಲ್ಲಿ ಪ್ರವೀಣತೆಯನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಅದು ಹೊಂದಿದೆ. ಕೇಂದ್ರವು ಶೀಘ್ರವಾಗಿ ಒದಲಾಗುತ್ತಿರುವ ರಾಜಸ್ವ ನಿರ್ಧಾರಣೆ ಮತ್ತು ಸಂಗ್ರಹಣೆಯ ಪರಿಸ್ಥಿತಿಯಲ್ಲಿ, ರಾಜಸ್ವ ಲೆಕ್ಕಪರಿಶೋಧನೆಯಲ್ಲಿ ಹೊರಬರುತ್ತಿರುವ ಕ್ಷೇತ್ರಗಳಲ್ಲಿ ಮಾಹಿತಿ ಹಂಚಿಕೊಳ್ಳುವಿಕೆ, ಕುಶಲತೆಯ ಅಭಿವೃದ್ಧಿ ಮತ್ತು ಸಂಶೋಧನೆಗೆ ಕೇಂದ್ರವು ಸಹಾಯ ಮಾಡುವುದು ಎಂದು ತಿಳಿಸಿದರು.
ಮೊದಲ ಹಂತವಾಗಿ, ಮುಂದಿನ ಎಂಟು ತಿಂಗಳಲ್ಲಿ, ಕೇಂದ್ರೀಯ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ತೆರಿಗೆಗಳಿಗೆ ಸಂಬಂಧಿಸಿದಂತೆ ಎಲ್ಲ ರಾಜಸ್ವ ದತ್ತಾಂಶಗಳ ಸಂಗ್ರಹಣೆ, ತಾಳೆ ನೋಡುವಿಕೆ ಮತ್ತು ವಿಶ್ಲೇಷಣೆಗಾಗಿ ಒಂದು ದತ್ತಾಂಶ ಭಂಡಾರವನ್ನು ಸೆಡಾರ್ ಸ್ಥಾಪಿಸುವುದು. ಈ ಹಂತದಲ್ಲಿ ಶಾಸಕಾಂಗದಲ್ಲಿ ಮಂಡಿಸಲಾಗುವ ಗಣಕೀಕೃತ ಲೆಕ್ಕಪರಿಶೋಧನಾ ವರದಿಗಳಿಗಾಗಿ ಪರೀಕ್ಷಾ ಮಾದರಿಗಳನ್ನು ಮತ್ತು ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದರು.
ಸಮಾರಂಭದಲ್ಲಿ ಸರಕು ಮತ್ತು ಸೇವಾ ತೆರಿಗೆಗಳ (ಜಿಎಸ್‌ಟಿ) ಮೇಲೆ ಇ-ಸಂಹಿತೆಯನ್ನು ಬಿಡುಗಡೆಗೊಳಿಸಲಾಯಿತು. ಸಿಎಜಿರವರ ಕೇಂದ್ರೀಯ ರಾಜಸ್ವ ಲೆಕ್ಕಪರಿಶೋಧನಾ ವಿಭಾಗವು ಗಣಕೀಕೃತ ಲೆಕ್ಕಪರಿಶೋಧನಾ ವರದಿಯ ಒಂದು ಪರೀಕ್ಷಾ ಮಾದರಿಯನ್ನು ಮತ್ತು ಲೆಕ್ಕ ಪರಿಶೋಧನಾ ಯೋಜನೆಗಾಗಿ ಸೀಮಾ ಸುಂಕಕ್ಕೆ ಸಂಬಂಧಿಸಿದ ದತ್ತಾಂಶಗಳ ನಿಯಂತ್ರಣ ಸಾಧನಗಳನ್ನು ಹಾಗೂ ಸರಕು ಮತ್ತು ಸೇವಾ ತೆರಿಗೆಗಳ ಬಗ್ಗೆ ವಿದ್ಯುನ್ಮಾನ ಸ್ವ-ನಿರ್ಧಾರಣೆಯ ಸಾಧನವನ್ನು ಪ್ರದರ್ಶಿಸಿದರು.
ಇದು ಗಣಕೀಕೃತ ರಾಜಸ್ವ ಲೆಕ್ಕಪರಿಶೋಧನೆಯಲ್ಲಿ ಇಲಾಖೆಯ ಉದ್ದೇಶ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಿದ್ದು, ಲೆಕ್ಕಪರಿಶೋಧನೆಯನ್ನು ನಿರ್ವಹಿಸುವಲ್ಲಿ ಹೆಚ್ಚಿನ ದಕ್ಷತೆ, ಪಾರದರ್ಶಕತೆ ಮತ್ತು ವಿಶ್ವಾಸದತ್ತ ಕೊಂಡೊಯ್ಯುವುದು ಎಂದು ಅವರು ವ್ಯಾಖ್ಯಿನಿಸಿದರು.