ದೇಶದ ಪಾಲಿಗೆ ‘ನವೆಂಬರ್ 8’ ಕರಾಳ ದಿನ: ಬಸವನಗೌಡ ಬಾದರ್ಲಿ
ಬೆಂಗಳೂರು, ಆ.30: ಪ್ರಧಾನಿ ನರೇಂದ್ರ ಮೋದಿ 2016ನೆ ಸಾಲಿನ ನವೆಂಬರ್ 8ರಂದು 1 ಸಾವಿರ ಹಾಗೂ 500 ರೂ.ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ್ದು, ಆ ದಿನ ಭಾರತದ ಇತಿಹಾಸದ ಪುಟಗಳಲ್ಲಿ ಕರಾಳ ದಿನವೆಂದು ದಾಖಲಾಗಿದೆ ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸವನಗೌಡ ಬಾದರ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದ ಸ್ವಾತಂತ್ರ ಉದ್ಯಾನವನದಿಂದ ನೃಪತುಂಗ ರಸ್ತೆಯಲ್ಲಿರುವ ಆರ್‌ಬಿಐ ಕಚೇರಿವರೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರಮೋದಿ ವಿರುದ್ಧ ನಡೆಸಿದ ಪಾದಯಾತ್ರೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿ ನೋಟುಗಳ ಅಮಾನ್ಯ ಮಾಡುವಾಗ 15 ಲಕ್ಷ ಕೋಟಿ ರೂ.ಗೂ ಅಧಿಕ ಹಣ ಬ್ಯಾಂಕ್ ವ್ಯವಸ್ಥೆಗೆ ಬರಲಿದ್ದು, ಕಪ್ಪು ಹಣ ತೆರವಿಗಾಗಿ ಅನುಕೂಲವಾಗುತ್ತದೆ ಎಂದು ಹೇಳಿದ್ದರು. ಆದರೆ, 10 ತಿಂಗಳು ಕಳೆದರೂ ಪ್ರಧಾನಿಯಾಗಲಿ, ಕೇಂದ್ರ ಹಣಕಾಸು ಸಚಿವರಾಗಲಿ ಅಥವಾ ಆರ್‌ಬಿಐ ಆಗಲಿ ಇಲ್ಲಿಯವರೆಗೆ ಎಷ್ಟು ಸಂಖ್ಯೆಯ ಹಳೆಯ ನೋಟುಗಳು ಜಮೆಯಾಗಿವೆ ಎಂಬ ಮಾಹಿತಿ ನೀಡಿಲ್ಲ ಎಂದು ಕಿಡಿಗಾರಿದರು.
ನೋಟುಗಳ ಅಮಾನ್ಯ ನಂತರ ಎಷ್ಟು ಪ್ರಮಾಣದ ಕಪ್ಪು ಹಣವನ್ನು ಪತ್ತೆ ಹಚ್ಚಲಾಗಿದೆ ಎಂಬ ಮಾಹಿತಿಯೂ ಇವರ ಬಳಿ ಇಲ್ಲ. ಆದುದರಿಂದ, ನೋಟುಗಳ ಅಮಾನ್ಯ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಬಸವನಗೌಡ ಬಾದರ್ಲಿ ಆಗ್ರಹಿಸಿದರು.