×
Ad

ರಾಜ್ಯದ ಎಲ್ಲ ವಿವಿಗಳಲ್ಲಿ ಕನ್ನಡ ಬೋಧನೆ ಕಡ್ಡಾಯ: ಎಸ್.ಜಿ.ಸಿದ್ಧರಾಮಯ್ಯ

Update: 2017-08-30 21:22 IST

ಬೆಂಗಳೂರು, ಆ.30: ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಲ್ಲ ವಿಶ್ವವಿದ್ಯಾನಿಲಯಗಳು ಹಾಗೂ ಅದರ ವ್ಯಾಪ್ತಿಗೆ ಬರುವ ಕಾಲೇಜುಗಳಲ್ಲಿ ಎರಡು ವರ್ಷ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ಧರಾಮಯ್ಯ ತಿಳಿಸಿದ್ದಾರೆ.

ಬುಧವಾರ ನಗರದ ರಾಜೀವಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದ ಅವರು, ರಾಜ್ಯದಲ್ಲಿರುವ ಎಲ್ಲ ವಿವಿಗಳು ಹಿ.ಚಿ.ಬೋರಲಿಂಗಯ್ಯ ವರದಿಯ ಶಿಫಾರಸಿನನ್ವಯ ಪಠ್ಯಕ್ರಮಗಳನ್ನು ರೂಪಿಸಿಕೊಂಡು ಪ್ರಸಕ್ತ ಸಾಲಿನಿಂದಲೇ ಪ್ರಾರಂಭಿಸಬೇಕೆಂದು ಸೂಚನೆ ನೀಡಿದರು.

ರಾಜೀವಗಾಂಧಿ ವೈದ್ಯಕೀಯ ವಿಜ್ಞಾನಗಳ ವಿವಿಯಲ್ಲಿ ಬೇಸಿಕ್ ನರ್ಸಿಂಗ್ ಬಿಎಸ್ಸಿಯಲ್ಲಿ ಕನ್ನಡವನ್ನು ಬೋಧಿಸುತ್ತಿರುವುದು ಶ್ಲಾಘನೀಯ. ಆದರೆ, ಆಡಳಿತಕ್ಕೆ ಸಂಬಂಧಿಸಿದಂತೆ ಅದರಲ್ಲೂ ಪ್ರಮುಖವಾಗಿ ಅಂತರ್ಜಾಲ ಪುಟ, ಕಚೇರಿ ಪತ್ರ ವ್ಯವಹಾರಗಳು ಮತ್ತು ಅಧಿಸೂಚನೆಗಳು ಆಂಗ್ಲ ಭಾಷೆಯಲ್ಲಿದ್ದು ಕೂಡಲೇ ಸರಿಪಡಿಸಿಕೊಳ್ಳುವಂತೆ ಎಚ್ಚರಿಕೆ ನೀಡಿದರು.

ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಕನ್ನಡ ಹಿತಾಸಕ್ತಿ ಕಾಪಾಡಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ. ಯಾವ ಭಾಷೆಯನ್ನೂ ತಿರಸ್ಕಾರ ಮಾಡಬೇಡಿ ಮತ್ತು ಕನ್ನಡವನ್ನು ಮರೆಯಬೇಡಿ. ನಿಜವಾದ ಒಕ್ಕೂಟ ವ್ಯವಸ್ಥೆ ಎಂದರೆ ಕೇಂದ್ರ ಸರಕಾರಕ್ಕೂ ಕೂಡ ಪ್ರಾದೇಶಿಕ ಭಾಷೆಗಳಲ್ಲಿ ಪತ್ರ ಬರೆದು ವ್ಯವಹಾರ ನಡೆಸಿ ನಮ್ಮದೇ ಭಾಷೆಯಲ್ಲಿ ಉತ್ತರ ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಕುಲಪತಿ ರಮೇಶ್, ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ವಿವಿಯ ಕುಲಸಚಿವ ನೂರ್ ಮನ್ಸೂರ್, ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ನರಸಿಂಹಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News