×
Ad

2019ರ ವೇಳೆಗೆ ಎಲ್ಲ ಸ್ಥಳೀಯ ಸಂಸ್ಥೆಗಳು ಬಯಲು ಬಹಿರ್ದೆಸೆ ಮುಕ್ತ: ಸಿಎಂ ಸಿದ್ದರಾಮಯ್ಯ

Update: 2017-08-31 19:07 IST

ಬೆಂಗಳೂರು, ಆ. 31: ಕರ್ನಾಟಕ ರಾಜ್ಯದ 227 ನಗರ ಸ್ಥಳೀಯ ಸಂಸ್ಥೆಗಳನ್ನು 2019ರ ಅಕ್ಟೋಬರ್ 2ರ ವೇಳೆಗೆ ಬಯಲು ಬಹಿರ್ದೆಸೆ ಮುಕ್ತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಗುರುವಾರ ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯದ ಆಶ್ರಯದಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಿದ್ದ ನಗರೋತ್ಥಾನ 3ನೆ ಹಂತದ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬಯಲು ಶೌಚಾಲಯದ ವ್ಯವಸ್ಥೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದರಿಂದ ರೋಗ ರುಜಿನಗಳು ಹೆಚ್ಚುತ್ತವೆ. ಜೊತೆಗೆ ಪರಿಸರವು ಮಾಲಿನ್ಯವೂ ಆಗುತ್ತದೆ. ಆದುದರಿಂದ ಬಯಲು ಬಹಿರ್ದೆಸೆ ಮುಕ್ತ ಪ್ರದೇಶಗಳನ್ನಾಗಿ ಮಾಡುವುದು ರಾಜ್ಯ ಸರಕಾರದ ಉದ್ದೇಶವಾಗಿದೆ. ಅಲ್ಲದೆ, ಪ್ರತಿಯೊಬ್ಬರಿಗೂ ಶೌಚಾಲಯ ವ್ಯವಸ್ಥೆ ಕಲ್ಪಿಸುವುದು ಯೋಜನೆಯ ಮುಖ್ಯ ಉದ್ದೇಶ ಎಂದರು.

ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಅನುಗುಣವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸರಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಸರಕಾರ ಎಲ್ಲ ಕ್ರಮ ಕೈಗೊಂಡಿದೆ. ಅಧಿಕಾರಿಗಳು ಸರಕಾರದ ಈ ಮಹತ್ವದ ಯೋಜನೆ ಸಫಲವಾಗುವಂತೆ ಆದ್ಯತೆ ಮೇಲೆ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ರಾಜ್ಯ ಸರಕಾರ ಜನಪರ ಯೋಜನೆಗಳನ್ನು ರೂಪಿಸುತ್ತದೆ. ಕಾಮಗಾರಿಗಳು ವಿಳಂಬವಾದಲ್ಲಿ ಹಣಕಾಸಿನ ಹೊರೆ ಹೆಚ್ಚಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಕಾಲಮಿತಿಯಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಆಸ್ಥೆ ವಹಿಸಬೇಕು ಎಂದು ಸಲಹೆ ನೀಡಿದರು.

ನಗರೋತ್ಥಾನ ಯೋಜನೆಯನ್ನು ಸರಕಾರ ಮೂರು ಹಂತಗಳಲ್ಲಿ ಕೈಗೆತ್ತಿಕೊಂಡಿದ್ದು, ಮೊದಲ ಹಂತದಲ್ಲಿ 1,454 ಕೋಟಿ ರೂ., 2ನೆ ಹಂತಕ್ಕೆ 2,060 ಕೋಟಿ ರೂ.ಹಣ ಬಿಡುಗಡೆಮಾಡಿದ್ದು, ಎರಡು ಹಂತದ ಕಾಮಗಾರಿಗಳು ಪೂರ್ಣಗೊಂಡಿದೆ. ಇದೀಗ ಮೂರನೆ ಹಂತದ ಯೋಜನೆಗೆ 2,900 ಕೋಟಿ ರೂ.ಬಿಡುಗಡೆಮಾಡಿದ್ದು, ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದ ಅವರು, ಗ್ರಾಮೀಣ ಪ್ರದೇಶಗಳಲ್ಲಿ 55 ಲಕ್ಷ ಹಾಗೂ ನಗರದ ಪ್ರದೇಶಗಳಲ್ಲಿ 4 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ದಿನೇ ದಿನೇ ನಗರೀಕರಣ ಜಾಸ್ತಿಯಾಗುತ್ತಿದ್ದು, ನಗರಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಂತಹ ಜನರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಸರಕಾರ ಆದ್ಯತೆ ಮೇಲೆ ಕೆಲಸ ಮಾಡುತ್ತಿದೆ ಎಂದು ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

ಹಣ ನಮ್ಮದು ಹೆಸರು ಅವರದ್ದು: ಸ್ವಚ್ಛ ಭಾರತ್ ಯೋಜನೆ ಹೊಸದೇನಲ್ಲ. ಈ ಹಿಂದೆ ‘ನಿರ್ಮಲ ಭಾರತ’ ಯೋಜನೆ ಹೆಸರನ್ನು ಬದಲಾವಣೆ ಮಾಡಲಾಗಿದೆ. ಇದೀಗ ಅಮೃತ್ ಮತ್ತು ಸ್ಮಾರ್ಟ್‌ಸಿಟಿ ಯೋಜನೆಗಳಿಗೂ ರಾಜ್ಯ ಸರಕಾರ ಶೇ.50ರಷ್ಟು ಹಣ ಮತ್ತು ಭೂಮಿಯನ್ನು ನೀಡುತ್ತದೆ. ಆದರೆ, ಹೆಸರು ಮಾತ್ರ ಕೇಂದ್ರ ಸರಕಾರದ್ದು ಎಂದು ಸಿದ್ದರಾಮಯ್ಯ ಟೀಕಿಸಿದರು.

ಇದೇ ಸಂದರ್ಭದಲ್ಲಿ ಬಯಲು ಬಹಿರ್ದೆಸೆ ಮುಕ್ತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಂಗಳೂರು, ಮೈಸೂರು ಸೇರಿದಂತೆ 19 ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು. ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಮಾಣ ಪತ್ರ ಸ್ವೀಕರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ನಗರಾಭಿವೃದ್ಧಿ ಸಚಿವ ಆರ್.ರೋಷನ್ ಬೇಗ್ ವಹಿಸಿದ್ದು, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಶಾಸಕರಾದ ಕೋನರೆಡ್ಡಿ, ಶಿವಲಿಂಗೇಗೌಡ, ರಹೀಂಖಾನ್, ವಿಜಯಾನಂದ ಕಾಶಪ್ಪನವರ್, ಶಿವಾನಂದ ಪಾಟೀಲ್, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಡಾ.ವಿಶಾಲ್ ಸೇರಿ ಇನ್ನಿತರರು ಹಾಜರಿದ್ದರು.


ನಾವು ಚಿಕ್ಕವರಿರುವಾಗ ಕೆರೆ ಕಡೆಗೆ ಹೋಗುತ್ತಿದ್ದೆವು, ಅದೇ ನೀರನ್ನು ಕುಡಿಯಲು ಬಳಸುವಂತಹ ಸ್ಥಿತಿ ಇತ್ತು. ಇದೀಗ ಪರಿಸ್ಥಿತಿ ಬದಲಾಗಿದೆ. ಡೆಂಗ್, ಚಿಕನ್‌ಗುನ್ಯ ಸೇರಿ ಇನ್ನಿತರ ಮಾರಕ ರೋಗಗಳ ತಡೆ ಹಾಗೂ ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಬಯಲು ಬಹಿರ್ದೆಸೆಗೊಳಿಸಲು ಸ್ಥಳೀಯ ಸಂಸ್ಥೆಗಳು ಆದ್ಯತೆ ನೀಡಬೇಕು.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News