ಪತ್ನಿಗೆ ಹಲ್ಲೆ ನಡೆಸಿ ಪತಿ ಆತ್ಮಹತ್ಯೆ
ಬೆಂಗಳೂರು, ಆ.31: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ದೂರವಿದ್ದ ಪತ್ನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಯಲಹಂಕದ ಶ್ರೀನಿವಾಸಪುರದ ಕೋಗಿಲು ಲೇಔಟ್‌ನ ನಿವಾಸಿ ನಾಗರಾಜ್(32) ಆತ್ಮಹತ್ಯೆ ಮಾಡಿಕೊಂಡಿದ್ದು, ಈತನಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತ್ನಿ ದೇವಿ (28) ಎಂಬುವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಗರಾಜ್ ಹತ್ತು ವರ್ಷಗಳ ಹಿಂದೆ ದೇವಿಯನ್ನು ವಿವಾಹವಾಗಿದ್ದರು. ಇತ್ತೀಚೆಗೆ ದೇವಿ ಬೇರೊಬ್ಬನೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಾಳೆ ಎಂದು ನಾಗರಾಜ್ ಶಂಕಿಸಿದ್ದು, ಇದರಿಂದಾಗಿ ಇಬ್ಬರ ನಡುವೆ ವೈಮನಸ್ಯ ಉಂಟಾಗಿದ್ದು, ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಜಗಳದಿಂದ ಬೇಸತ್ತ ದೇವಿ, ನಾಗರಾಜ್‌ನನ್ನು ತೊರೆದು ತಾಯಿ ಕಸ್ತೂರಿಯ ಶ್ರೀನಿವಾಸಪುರದ ಮನೆಯಲ್ಲಿ ವಾಸಿಸುತ್ತಿದ್ದಳು. ಬುಧವಾರ ಮಧ್ಯಾಹ್ನ 2ರ ವೇಳೆ ದೇವಿ ಹತ್ತಿರದ ಅಂಗಡಿಯಲ್ಲಿ ಮೊಬೈಲ್‌ಗೆ ಕರೆನ್ಸಿ ಹಾಕಿಸಿಕೊಂಡು ಬರಲು ನಡೆದು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ನಾಗರಾಜ ಮಚ್ಚಿನಿಂದ ಕುತ್ತಿಗೆಗೆ ಬಲವಾಗಿ ಹೊಡೆದು ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ದೇವಿಯನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಈ ಸಂಬಂಧ ಮೊಕದ್ದಮೆ ದಾಖಲು ಮಾಡಲಾಗಿತ್ತು. ಪರಾರಿಯಾಗಿದ್ದ ನಾಗರಾಜ್ ಬುಧವಾರ ಮಧ್ಯರಾತ್ರಿ ಕೋಗಿಲು ಲೇಔಟ್‌ನ ಮನೆಯ ಸಮೀಪದ ಖಾಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.