×
Ad

ಎಸ್ಸಿ, ಎಸ್ಟಿ ಸಂಘಗಳು ಕುಗ್ರಾಮಗಳನ್ನು ದತ್ತು ಪಡೆಯಲಿ: ಎಲ್.ಹನುಮಂತಯ್ಯ

Update: 2017-08-31 19:46 IST

ಬೆಂಗಳೂರು, ಆ.31: ಕೇಂದ್ರ ಹಾಗೂ ರಾಜ್ಯ ಸರಕಾರಿ ಇಲಾಖೆಯಲ್ಲಿರುವ ಎಸ್ಸಿ, ಎಸ್ಟಿ ನೌಕರರ ಸಂಘಗಳು ಕುಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲಿ. ಇಂತಹ ಸಕಾರಾತ್ಮಕ ಕಾರ್ಯಕ್ರಮಗಳಿಂದ ಮಾತ್ರ ಡಾ.ಬಿ.ಆರ್.ಅಂಬೇಡ್ಕರ್ ನಿಜದ ಆಶಯ ಈಡೇರುತ್ತದೆ ಎಂದು ಹಿರಿಯ ಸಾಹಿತಿ ಡಾ.ಎಲ್.ಹನುಮಂತಯ್ಯ ತಿಳಿಸಿದ್ದಾರೆ.

ಗುರುವಾರ ಕೆಆರ್‌ಐಡಿಎಲ್‌ನ ಎಸ್ಸಿ, ಎಸ್ಟಿ ಅಧಿಕಾರಿಗಳ ಮತ್ತು ನೌಕರರ ಸಂಘದ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ 126ನೆ ಜಯಂತ್ಯುತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಎಸ್ಸಿ, ಎಸ್ಟಿ ಸರಕಾರಿ ನೌಕರರು ಡಾ.ಬಿ.ಆರ್.ಅಂಬೇಡ್ಕರ್ ಫಲಾನುಭವಿಗಳಾಗಿದ್ದಾರೆ. ಅವರು ನೀಡಿದ ಸಂವಿಧಾನದ ಫಲವಾಗಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಹೀಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಋಣವನ್ನು ತೀರಿಸುವುದು ನಮ್ಮ ಜವಾಬ್ದಾರಿಯಾಗಬೇಕು. ಆ ನಿಟ್ಟಿನಲ್ಲಿ ಎಸ್ಸಿ, ಎಸ್ಟಿ ಸರಕಾರಿ ಸಂಘಗಳು ಮೂಲಭೂತ ಸೌಕರ್ಯಗಳಿಲ್ಲದೆ ನಲುಗುತ್ತಿರುವ ಕುಗ್ರಾಮಗಳನ್ನು ದತ್ತು ಪಡಿದು ಅಭಿವೃದ್ಧಿ ಪಡಿಸಿ, ಅಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಆಚರಿಸಬೇಕು ಎಂದು ಆಶಿಸಿದರು.

ಇವತ್ತಿಗೂ ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ನಡೆಯದ ಒಂದು ಗ್ರಾಮವನ್ನು ಹುಡುಕಲು ಸಾಧ್ಯವಿಲ್ಲ. ದೇವಸ್ಥಾನಕ್ಕೆ ಪ್ರವೇಶಿಸಿದ, ದೇವರ ಪ್ರಸಾದ ತಿಂದ ಎನ್ನುವ ಕ್ಷುಲಕ ಕಾರಣಗಳಿಗೆ ದಲಿತರನ್ನು ಬರ್ಬರವಾಗಿ ಹತ್ಯೆ ಮಾಡಲಾಗುತ್ತಿದೆ. ಸಾರ್ವಜನಿಕ ಬಾವಿಯಲ್ಲಿ ನೀರು ಕುಡಿದ ಕುಟುಂಬದ ಸದಸ್ಯರಿಗೆ ಗ್ರಾಮಗಳಿಂದಲೇ ಬಹಿಷ್ಕಾರ ಹಾಕಲಾಗುತ್ತಿದೆ. ಇಂತಹ ಘಟನೆಗಳು ದಿನನಿತ್ಯ ನಡೆಯುತ್ತಿದ್ದರೂ ಸಮಾಜದಲ್ಲಿ ಏನೂ ಆಗಿಲ್ಲವೆಂದು ವೌನವಹಿಸಲಾಗುತ್ತಿದೆ ಎಂದು ಅವರು ವಿಷಾದಿಸಿದರು.

ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಗೋಪಾಲ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ವಿಚಾರಗಳು ಎಲ್ಲ ಸಮುದಾಯದಕ್ಕೂ ತಲುಪದಂತೆ ಪಟ್ಟಭದ್ರ ಹಿತಾಸಕ್ತಿಗಳು ತಡೆದಿದ್ದಾರೆ. ಹೀಗಾಗಿ ಡಾ.ಬಿ.ಆರ್.ಅಂಬೇಡ್ಕರ್‌ರ ನಿಜವಾದ ಆಶಯ ಜನತೆಗೆ ಗೊತ್ತಾಗುತ್ತಿಲ್ಲ. ಇನ್ನು ಮುಂದಾದರು ಅಂಬೇಡ್ಕರ್ ಚಿಂತನೆಗಳು ತಲುಪುವಂತಹ ಕಾರ್ಯ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ತಿಳಿಸಿದರು.

ಅಮೆರಿಕಾ, ಜಪಾನ್, ಜರ್ಮನಿ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಮೀಸಲಾತಿಯಿದೆ. ಆದರೆ, ಭಾರತದಲ್ಲಿ ಕೆಲವರು ಮೀಸಲಾತಿಯ ಕುರಿತು ಅಪಪ್ರಚಾರ ಮಾಡಲಾಗುತ್ತಿದ್ದಾರೆ. ದೇಶದಲ್ಲಿರುವ ತಾರತಮ್ಯ ಹೋಗಲಾಡಿಸಿ ಎಲ್ಲರೂ ಸಮಾನವಾಗಿ ಬದುಕಬೇಕಾದರೆ ಎಲ್ಲ ರಂಗದಲ್ಲೂ ಹಿಂದುಳಿದವರಿಗೆ ಮೀಸಲಾತಿಯ ಅವಕಾಶ ಕೊಡುವುದು ಸಾಮಾಜಿಕ ನ್ಯಾಯವಾಗಿದೆ. ಹೀಗಾಗಿ ರಾಜ್ಯ ಹಾಗೂ ದೇಶದ ಜನತೆ ಮೀಸಲಾತಿಯನ್ನು ವಿಶಾಲಾರ್ಥದಲ್ಲಿ ನೋಡಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆಆರ್‌ಐಡಿಎಲ್ ಅಧ್ಯಕ್ಷರಾಗಿರುವ ಶಾಸಕ ರಾಜಶೇಖರ ಬಿ.ಪಾಟೀಲ್, ಕೆಆರ್‌ಐಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಟಿ.ರಮೇಶ್, ನಿರ್ದೇಶಕರಾದ ಧರ್ಮೇಂದ್ರ, ರಾಜಣ್ಣ, ಗೋವಿಂದ್ ಮತ್ತಿತರರಿದ್ದರು.

ದೇಶಕ್ಕೆ ಜಗತ್ತಿನಲ್ಲಿಯೇ ಅತ್ಯುನ್ನತವಾದ ಸಂವಿಧಾನ ರಚಿಸಿ ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಹುಟ್ಟಿದ ದಿನವನ್ನು ಯುನೆಸ್ಕೋ ವಿಶ್ವ ಜ್ಞಾನದ ದಿನವನ್ನಾಗಿ ಆಚರಿಸುತ್ತಿದೆ. ವಿದೇಶಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಆಚರಿಸಿ ಅವರ ಉದಾತ್ತವಾದ ಚಿಂತನೆಗಳಿಂದ ಪ್ರೇರಿತರಾಗಿದ್ದಾರೆ. ಆದರೆ, ಭಾರತದ ಜಾತಿ ವ್ಯವಸ್ಥೆಯಲ್ಲಿ ಅಂಬೇಡ್ಕರನ್ನು ದಲಿತರ ನಾಯಕನೆಂದು ಹೇಳುವ ಮೂಲಕ ಒಂದು ಜಾತಿಗೆ ಕಟ್ಟಲಾಗುತ್ತಿದೆ. ಇದು ಡಾ.ಬಿ.ಆರ್.ಅಂಬೇಡ್ಕರ್‌ಗೆ ಮಾಡಿದ ಅವಮಾನವೇ ಹೊರತು ಬೇರೇನು ಅಲ್ಲ.
-ಎಲ್.ಹನುಮಂತಯ್ಯ ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News