50 ಮಂದಿಗೆ ಉಚಿತ ಮಂಡಿ ಶಸ್ತ್ರಚಿಕಿತ್ಸೆ: ಡಾ.ಎಚ್.ಎಸ್.ಚಂದ್ರಶೇಖರ
ಬೆಂಗಳೂರು, ಆ.31: ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ ವತಿಯಿಂದ ಮೂರು ತಿಂಗಳಲ್ಲಿ ಆರ್ಥಿಕವಾಗಿ ಅಶಕ್ತರಾದ 50 ಜನರಿಗೆ ಉಚಿತ ಮಂಡಿ ಜೋಡಣೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಎಚ್.ಎಸ್.ಚಂದ್ರಶೇಖರ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ 50ಮಂದಿಗೆ ಉಚಿತ ಮಂಡಿ ಜೋಡಣೆ ಶಸ್ತ್ರಚಿಕಿತ್ಸೆ ನೀಡಿ ಯಶಸ್ವಿಯಾಗಿದ್ದೇವೆ. ಎರಡನೆ ಹಂತದಲ್ಲೂ 50ಮಂದಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯು ಮೊಣಕಾಲು ಮರು ಜೋಡಣೆ ವೆಚ್ಚವನ್ನು 70ಸಾವಿರ ರೂ.ನಿಂದ 50ಸಾವಿರ ರೂ.ಗೆ ಇಳಿಸಿ ಕಚೇರಿ ವೆಚ್ಚಗಳನ್ನು ಶೇ.50 ರಷ್ಟು ಕಡಿಮೆ ಮಾಡಲಾಗಿದೆ. ದಾನಿಗಳಿಂದ ಬರುವ ಹಣದಿಂದ ಬಡವರಿಗೆ ಉಚಿತವಾಗಿ ಶಸ್ತ್ರ ಚಿಕಿತೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಬಿಪಿಎಲ್ ಕಾರ್ಡುದಾರರು, ಯಶಸ್ವಿನಿ ಯೋಜನೆಯಲ್ಲಿ ನೋಂದಾಯಿತರಾದವರಿಗೂ ಈ ಸೌಲಭ್ಯ ನೀಡಲಾಗುತ್ತದೆ. ಎರಡನೆ ಹಂತದಲ್ಲಿ ಶಸ್ತ್ರಚಿಕಿತ್ಸೆ ಪಡೆಯಲು ಈಗಾಗಲೇ 40 ಮಂದಿಯನ್ನು ನೋಂದಣಿ ಮಾಡಿಕೊಳ್ಳಲಾಗಿದೆ. ಈ ಸೌಲಭ್ಯ ಹೆಚ್ಚು ಜನರಿಗೆ ತಲುಪಬೇಕು ಎಂಬುದು ತಮ್ಮ ಆಶಯವಾಗಿದ್ದು, ದಾನಿಗಳು ನೀಡುವ ಹಣ ಹಾಗೂ ಸರಕಾರದ ಯೋಜನೆಗಳನ್ನು ಬಳಕೆಮಾಡಿಕೊಂಡು ರೋಗಿಗಳಿಗೆ ಹೊರೆಯಾಗದ ರೀತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಪಡೆಯಲು ಎರಡು ಲಕ್ಷದಿಂದ ಐದು ಲಕ್ಷ ರೂ.ವರೆಗೆ ವೆಚ್ಚವಾಗುತ್ತದೆ. ಬಡವರಿಗೆ ಇಷ್ಟು ದೊಡ್ಡ ಮೊತ್ತವನ್ನು ಕಟ್ಟಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಸಾದ್ಯವಾಗದೆ ನಡೆಯಲೂ ಆಗದ ಸ್ಥಿತಿಯಲ್ಲಿ ಇರುತ್ತಾರೆ. ಇಂತಹ ರೋಗಿಗಳಿಗೆ ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ ವತಿಯಿಂದ ಉಚಿತ ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಒಂದು ದಿನದಲ್ಲಿ ಎರಡು, ವಾರದಲ್ಲಿ ನಾಲ್ಕರಂತೆ ಶಸ್ತ್ರಚಿಕಿತ್ಸೆ ಮಾತ್ರ ಮಾಡಲು ಸಾಧ್ಯವಾಗುತ್ತದೆ. ರೋಗಿಗಳಿಗೆ ಮುಂಚಿತವಾಗಿಯೇ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವ ದಿನಾಂಕ ಹಾಗೂ ಶಸ್ತ್ರಚಿಕಿತ್ಸೆ ದಿನದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ರೋಗಿಗಳನ್ನು ಆಸ್ಪತ್ರೆಯಿಂದ ಕಳುಹಿಸುವ ಮೊದಲು ಯಾವ ರೀತಿಯಲ್ಲಿ ವ್ಯಾಯಾಮ(ಫಿಸಿಯೋಥೆರಪಿ) ಮಾಡಬೇಕು ಎಂಬುದರ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಈಗಾಗಲೇ ಚಿಕಿತ್ಸೆ ಪಡೆದ ರೋಗಿಗಳ ಪರಿಚಯ ಮಾಡಿಸಲಾಯಿತು. ಚಿಕಿತ್ಸೆ ಪಡೆದ ಪಾವಗಡದ ಮುತ್ತಮ್ಮ ಅವರ ಸೋದರ ಮುನಿರಾಜು ಮಾತನಾಡಿ, ಬಡವರಿಗೆ ಉಚಿತವಾಗಿ ಮಂಡಿ ಶಸ್ತ್ರಚಿಕಿತ್ಸೆ ನೀಡುತ್ತಿರುವುದು ನಮ್ಮಂತಹ ಬಡವರಿಗೆ ಬಹಳ ಅನುಕೂಲವಾಗಿದೆ. ವೈದ್ಯರು ರೋಗಿಗಳಿಗೆ ಅತ್ಯಂತ ವಿಶ್ವಾಸದಿಂದ ನೋಡಿಕೊಂಡಿದ್ದಾರೆ. ನಾವು ಅವರಿಗೆ ಆಭಾರಿಗಳಾಗಿದ್ದೇವೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಇತರೆ ವೈದ್ಯರು ಹಾಜರಿದ್ದರು.