ನನ್ನ ತೇಜೋವಧೆಗೆ ಹುನ್ನಾರ: ಲಕ್ಷ್ಮಿ ಹೆಬ್ಬಾಳ್ಕರ್ ಆರೋಪ
ಬೆಂಗಳೂರು, ಆ. 31: ನಾನು ನನ್ನ ತಾಯಿ ನಾಡಿನ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ನನ್ನ ಭಾಷಣದಿಂದ ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ತಾಯಿ ಕನ್ನಡಾಂಬೆ ಮತ್ತು ಕನ್ನಡ ನಾಡಿನ ಬಗ್ಗೆ ಅಪಾರವಾದ ಪ್ರೀತಿ ಹೊಂದಿದ್ದೇನೆ. ಆದರೆ, ಬೆಳಗಾವಿ ಜಿಲ್ಲೆಯ ಕೆಲ ನಾಯಕರು ಗಡಿ ವಿವಾದವನ್ನು ಮುಂದಿಟ್ಟುಕೊಂಡು ಕೆಲ ಮಾಧ್ಯಮಗಳಲ್ಲಿ ಅರ್ಧ ಸತ್ಯವನ್ನು ತೋರಿಸುವ ಮೂಲಕ ನನ್ನ ತೇಜೋವಧೆ ಮಾಡುವ ಹುನ್ನಾರವಿದು ಎಂದು ಲಕ್ಷ್ಮಿಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿ ಗಣೇಶೋತ್ಸವದಲ್ಲಿ ನಾನು ಮಾಡಿದ ಭಾಷಣ ನಾಡ ವಿರೋಧಿ ಎಂಬ ರೀತಿಯಲ್ಲಿ ಮಾತನಾಡಿದ್ದೇನೆಂಬುದು ಸತ್ಯಕ್ಕೆ ದೂರವಾದುದ್ದು. ಆ ರೀತಿ ಮಾತನಾಡುವ ಅಗತ್ಯತೆ ಮತ್ತು ಅನಿವಾರ್ಯತೆ ನನಗೆ ಖಂಡಿತವಾಗಿಯೂ ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ನನ್ನ ಭಾಷಣವನ್ನು ಪೂರ್ಣ ಕೇಳಿಸದೆ, ಅದರಲ್ಲಿನ ಕೆಲ ಅಂಶಗಳನ್ನು ಮಾತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿ ನನಗೆ ಮತ್ತು ನನ್ನ ಪಕ್ಷಕ್ಕೆ ಕೆಟ್ಟ ಹೆಸರು ತರುವ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಆದರೆ, ತಾನು ಬೆಳಗಾವಿ ಯುವಕರಿಗೆ ರಾಜ್ಯ ಸರಕಾರದ ಅಭಿವೃದ್ಧಿ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಲು ಸಲಹೆ ಮಾಡಿದ್ದೇನೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.