22 ವೈದ್ಯಕೀಯ ಸೀಟುಗಳಿಗೆ 4 ಸಾವಿರ ಆಕಾಂಕ್ಷಿಗಳು
ಬೆಂಗಳೂರು, ಆ.31: ವಿದ್ಯಾರ್ಥಿಗಳು ಬಿಟ್ಟ ಬಳಿಕ ಉಳಿದ 22 ವೈದ್ಯಕೀಯ ಸೀಟುಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಪ್ ಆ್ಯಪ್ ಸುತ್ತಿಗೆ ಸುಮಾರು 4 ಸಾವಿರ ಆಕಾಂಕ್ಷಿಗಳು ಪೈಪೋಟಿ ನಡೆಸಿದ್ದಾರೆ.
ಗುರುವಾರ ನಗರದ ಮಲ್ಲೇಶ್ವರದ 18ನೆ ರಸ್ತೆಯಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಧಾನ ಕಚೇರಿ ಮುಂಭಾಗ ಸಾವಿರಾರು ಆಕಾಂಕ್ಷಿಗಳು, ಪೋಷಕರು ಸೇರಿದ್ದರು. ಬೆಳಗ್ಗೆ 10.30ರಿಂದ ಪ್ರಾರಂಭವಾದ ಸೀಟು ಹಂಚಿಕೆ ಮಧ್ಯಾಹ್ನದ ವೇಳೆಗೆ ಮುಕ್ತಾಯಗೊಂಡಿತು.
ನೀಟ್ ರ್ಯಾಂಕ್ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಯಿತು. ಸೀಟು ಪಡೆದುಕೊಂಡವರು ಸಂತಸ ವ್ಯಕ್ತಪಡಿಸಿದರೆ, ಸಿಗದವರು ಕೆಇಎ ಮೋಸ ಮಾಡುತ್ತಿದೆ, ಡಿಡಿ ತರಲು ಹೇಳಿ ಸೀಟು ನೀಡಿಲ್ಲವೆಂದು ಕಿಡಿಕಾರಿದರು.
ಆ.26ರಂದು ರಜೆ ದಿನ ನಡೆಸಿದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿ ಡಿಡಿ ತಂದಿಲ್ಲವೆಂಬ ಕಾರಣಕ್ಕೆ ಸೀಟು ಕಳೆದುಕೊಂಡ ಬಹುತೇಕ ವಿದ್ಯಾರ್ಥಿಗಳು ಗುರುವಾರ ಕೂಡ ಭಾಗವಹಿಸಿದ್ದರು. ಈ ಪೈಕಿ ಕೆಲವರಿಗೆ ಸೀಟು ದೊರೆಯಿತು ಮತ್ತೆ ಕೆಲವರು ಡಿಡಿ ತಂದಿದ್ದರೂ ಸೀಟು ನಿರಾಕರಿಸಲಾಗಿದೆ ಎಂದು ಕೆಇಎ ಅಧಿಕಾರಿಗಳೊಂದಿಗೆ ಮಾತಿಗಿಳಿದ ದೃಶ್ಯ ಕಂಡು ಬಂದಿತು.
ಕೆಇಎ ಕಚೇರಿ ಮುಂದೆ ಜನ ಸಾಗರವೇ ಸೇರಿತ್ತು. ವಿದ್ಯಾರ್ಥಿಗಳು ಮತ್ತು ಪಾಲಕರು ಬೆಳಗಿನ ಜಾವ ಸುಮಾರು 6 ಗಂಟೆಗೆ ನೆರೆದಿದ್ದರಿಂದ ಹೆಚ್ಚಿನ ಗಲಾಟೆ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಅಧಿಕಾರಿಗಳ ಭದ್ರತೆಯನು್ನ ಕೆಇಎ ಪಡೆದಿತ್ತು.
ಸರಕಾರಿ ಕಾಲೇಜುಗಳ ಸೀಟಿಗೆ 16,700 ರೂ. ಮತ್ತು ಖಾಸಗಿ ಕಾಲೇಜಿನಲ್ಲಿರುವ ಸರಕಾರಿ ಕೋಟದ ಸೀಟುಗಳಿಗೆ 6,33,000 ರೂ. ಶುಲ್ಕವನ್ನು ನಿಗದಿಪಡಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಸಂಚಾರ ದಟ್ಟಣೆ: ಸಾವಿರಾರು ಆಕಾಂಕ್ಷಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬಳಿ ಸೇರಿದ್ದ ಕಾರಣ ನಗರದ ಮಲ್ಲೇಶ್ವರಂ 18 ಕ್ರಾಸ್, ಸ್ಯಾಂಕಿ ಕೆರೆ ರಸ್ತೆ, ಯಶವಂತಪುರ ಮಾರ್ಗ, ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜಿ ಕಡೆ ಸಂಚಾರ ದಟ್ಟಣೆ ಹೆಚ್ಚಾಗಿ, ವಾಹನ ಸವಾರರು ಪರದಾಡಿದರು.
ನನಗೆ 1,14,645 ರ್ಯಾಂಕ್ ಬಂದಿದೆ. ಆ.26ರಂದು ಡಿಡಿ ತಂದಿಲ್ಲವೆಂದು ಸೀಟು ನಿರಾಕರಿಸಿದ್ದರು. ಅಂದು ಆನ್‌ಲೈನ್ ಪೇಮೆಂಟ್ ಮಾಡಿಕೊಂಡು ಸೀಟು ನೀಡಿ ಎಂದರೂ ನೀಡಲಿಲ್ಲ. ಇಂದು ಕೂಡ ಸೀಟು ನೀಡಿಲ್ಲ. ಇಲ್ಲಿ ಅಕ್ರಮ ನಡೆಯುತ್ತಿದೆ.
-ತೇಜಸ್ವಿನಿ, ತುಮಕೂರು
ಇಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಯಾರು ಮೊದಲು ಬರುತ್ತಾರೋ ಅವರಿಗೆ ಸೀಟು ನೀಡಿದ್ದೇವೆ. ಅಲ್ಲದೆ, ನಾವು ಪಾರದರ್ಶಕವಾಗಿ ಸೀಟು ಹಂಚಿಕೆ ಮಾಡಿದ್ದೇವೆ.
-ಉಜ್ವಲ್ ಕುಮಾರ್ ೋಷ್, ಕಾರ್ಯನಿರ್ವಾಹಕ ನಿರ್ದೇಶಕ, ಕೆಇಎ