×
Ad

ತಿಮ್ಮಾಪೂರ, ರೇವಣ್ಣ, ಗೀತಾಗೆ ‘ಖುಲಾಯಿಸಿದ ಅದೃಷ್ಟ’

Update: 2017-08-31 20:12 IST

ಬೆಂಗಳೂರು, ಆ. 31: ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸೆ.1ರಂದು ಸಂಜೆ 5ಕ್ಕೆ ರಾಜಭವನದಲ್ಲಿ ನಡೆಯಲಿದ್ದು, ಮೂರು ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಶಾಸಕಿ ಗೀತಾ ಮಹದೇವ ಪ್ರಸಾದ್, ಮೇಲ್ಮನೆ ಸದಸ್ಯರಾದ ಆರ್.ಬಿ.ತಿಮ್ಮಾಪೂರ ಹಾಗೂ ಎಚ್.ಎಂ.ರೇವಣ್ಣ ನೂತನ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿದ್ದ ತಿಪಟೂರು ಕ್ಷೇತ್ರದ ಶಾಸಕ ಕೆ.ಷಡಕ್ಷರಿ ಅವರಿಗೆ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದೆ.

ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಅವರ ಅಕಾಲಿಕ ನಿಧನ, ಎಚ್.ವೈ.ಮೇಟಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ರಾಜೀನಾಮೆ ಹಿನ್ನೆಲೆಯಲ್ಲಿ ತೆರವಾಗಿದ್ದ ಸಂಪುಟದ 3 ಸ್ಥಾನಗಳು ನಾಳಿನ ಸಂಪುಟ ವಿಸ್ತರಣೆಯಿಂದ ಭರ್ತಿಯಾಗಲಿವೆ.

ಲಿಂಗಾಯತ ಸಮುದಾಯದ ಗೀತಾ ಮಹದೇವ ಪ್ರಸಾದ್, ಪರಿಶಿಷ್ಟ ಜಾತಿಯ ಆರ್.ಬಿ.ತಿಮ್ಮಾಪೂರ ಹಾಗೂ ಕುರುಬ ಸಮುದಾಯದ ಎಚ್.ಎಂ.ರೇವಣ್ಣ ಸಂಪುಟಕ್ಕೆ ಸೇರ್ಪಡೆಯಾಗುತ್ತಿದ್ದು, ಸಂಪುಟ ವಿಸ್ತರಣೆ ಬಳಿಕ ಕೆಲವರ ಖಾತೆಗಳೂ ಬದಲಾವಣೆ ಆಗುವ ಸಾಧ್ಯತೆಗಳಿವೆ.

ಆ.21ಕ್ಕೆ ಸಂಪುಟ ವಿಸ್ತರಣೆಗೆ ಎಲ್ಲ ಸಿದ್ಧತೆಗಳು ನಡೆದಿತ್ತಾದರೂ, ಕೊನೆಯ ಕ್ಷಣದಲ್ಲಿ ಮುಂದೂಡಲಾಗಿತ್ತು. ಆದರೆ, ನಿನ್ನೆ ರಾಜ್ಯಕ್ಕೆ ಆಗಮಿಸಿದ್ದ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಅನುಮತಿ ಪಡೆದು ಅಂತಿಮವಾಗಿ ಸಂಪುಟ ಸೇರುವವರ ಹೆಸರುಗಳನ್ನು ನಿರ್ಧರಿಸಲಾಗಿದೆ ಎಂದು ಗೊತ್ತಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಸಂಪುಟ ವಿಸ್ತರಣೆ ಮಾಡಲಾಗಿದ್ದು, ಶಾಸಕ ಕೆ.ಷಡಕ್ಷರಿ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಬೆಂಬಗಲಿರೆಂಬ ಕಾರಣಕ್ಕೆ ಅವರನ್ನು ಕೈ ಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೂ ಕೊನೆಯ ಕ್ಷಣದಲ್ಲಿ ಕೆಲ ಬದಲಾವಣೆಗಳಾದರೂ ಅಚ್ಚರಿಪಡಬೇಕಿಲ್ಲ.


‘ಸಚಿವ ಸಂಪುಟ ವಿಸ್ತರಣೆ ಸಮಾರಂಭ ಸೆ.1ರಂದು ರಾಜಭವನದಲ್ಲಿ ನಡೆಯಲಿದೆ. ಯಾರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆಂಬುದು ನಾಳೆ ಗೊತ್ತಾಗಲಿದೆ. ಆರ್.ಬಿ.ತಿಮ್ಮಾಪೂರ ಅವರು ಸಂಪುಟಕ್ಕೆ ಸೇರುವುದಿಲ್ಲ ಎಂದು ನಿಮಗೆ ಯಾರು ಹೇಳಿದ್ದು, ನಾಳೆ ಎಲ್ಲಕ್ಕೂ ಉತ್ತರ ಸಿಗುತ್ತದೆ’
-ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News