×
Ad

ತ್ರಿವಲಿ ತಲಾಕ್ ನಿಷೇಧ ತೀರ್ಪು: ಸುಪ್ರೀಂಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಕೆ

Update: 2017-08-31 20:17 IST

ಬೆಂಗಳೂರು, ಆ.31: ತ್ರಿವಲಿ ತಲಾಕ್ ನಿಷೇಧ ಮಾಡುವ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಮುಸ್ಲಿಂ ಜಾಗೃತಿ ಲೀಗ್ ವಿರೋಧಿಸಿದ್ದು, ಸುಪ್ರೀಂಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ತಿಳಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೀಗ್‌ನ ಅಧ್ಯಕ್ಷ ಎಚ್.ಎಂ.ಆಸಿಫ್ ಇಕ್ಬಾಲ್, ಸುಪ್ರೀಂಕೋರ್ಟ್‌ನ ತೀರ್ಪು ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳೊಂದಿಗೆ ಚೆಲ್ಲಾಟವಾಡಿದಂತೆ ಇದೆ. ದೇಶದ ಸಂವಿಧಾನ ಪ್ರತಿಯೊಂದು ಧರ್ಮಕ್ಕೂ ತನ್ನದೇ ಆದ ಧಾರ್ಮಿಕ ಹಕ್ಕು ನೀಡಿದೆ. ಈಗ ಕೋರ್ಟ್ ತೀರ್ಪು ನೀಡುವ ವೇಳೆ ಸಂವಿಧಾನದ ಚೌಕಟ್ಟಿನಲ್ಲಿ ತಪ್ಪು ಎಂದು ಉಲ್ಲೇಖಿಸಿದೆ. ಆದರೆ, ಇದು ನಮ್ಮ ಧಾರ್ಮಿಕತೆಯ ನೆಲೆಯಲ್ಲಿ ವಿರೋಧವಾಗಿದೆ ಎಂದರು.

ಇಂದಿನ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯಡಿಯಲ್ಲಿ ತನ್ನ ರಾಜಕೀಯ ಲಾಭಕ್ಕೆ, ಬಂಡವಾಳಶಾಹಿಗಳು, ಅಧಿಕಾರಶಾಹಿಗಳು ಮತ್ತು ಉಳ್ಳವರು ಮುಸ್ಲಿಂ ಸಮುದಾಯದ ಮೇಲೆ ನಿರಂತರವಾದ ದೌರ್ಜನ್ಯ ನಡೆಸುತ್ತಿದ್ದಾರೆ. ಈಗ ವೈಯಕ್ತಿಕ ಧರ್ಮದಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಹಾಗೂ ತನ್ನದೇ ಆದ ಕಟ್ಟುನಿಟ್ಟಿನ ನಿಯಮಗಳಿರುವ ಕಾನೂನನ್ನು ದುರ್ಬಲಗೊಳಿಸಲು ಹೊರಟಿರುವುದು ದೊಡ್ಡ ರಾಜಕೀಯ ಪಿತೂರಿಯಾಗಿದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ನ ತೀರ್ಪನ್ನು ಮುಸ್ಲಿಂ ಸಮುದಾಯ ಸ್ವೀಕರಿಸಲು ಸಿದ್ಧವಿಲ್ಲ. ಆದುದರಿಂದ ಕೂಡಲೇ ಕೋರ್ಟ್ ಈ ತೀರ್ಪನ್ನು ಮರು ಪರಿಶೀಲನೆ ಮಾಡಬೇಕು. ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮಗುರುಗಳ ಸಲಹೆ ಪಡೆದುಕೊಳ್ಳಬೇಕು ಹಾಗೂ ಇದುವರೆಗೂ ತಲಾಕ್ ನಡೆದ ಬಂದ ದಾರಿಯನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಲೀಗ್‌ನ ಪ್ರಧಾನ ಕಾರ್ಯದರ್ಶಿ ಜಿ.ಎಚ್.ಮಸೂದ್ ಅಹ್ಮದ್ ಮಾತನಾಡಿ, ದೇಶದಲ್ಲಿ ಅಲ್ಪಸಂಖ್ಯಾತರು, ದಲಿತರು ಯಾರೂ ಸುರಕ್ಷಿತವಾಗಿಲ್ಲ. ಇಂದು ಮುಸ್ಲಿಂ ಧಾರ್ಮಿಕ ಕಾನೂನಿನ ಮೇಲೆ ದಾಳಿ ನಡೆದಿದೆ. ಮುಂದೊಂದು ದಿನ ಕೈಸ್ತ್ರರು ಸೇರಿದಂತೆ ದಲಿತರ ಮೇಲೂ ಧರ್ಮದ ಕಾನೂನು ಜೊತೆ ಚೆಲ್ಲಾಟವಾಡುವ ಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ ಎಲ್ಲರೂ ಜಾಗೃರಾಗಬೇಕು ಎಂದು ಹೇಳಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News