ತಿಮ್ಮಾಪುರಗೆ ಸಂಕಷ್ಟ, ರೈಗೆ ಪುಷ್ಪಗುಚ್ಛ ನೀಡಿದ ಕೆಂಪಯ್ಯ

Update: 2017-09-01 07:04 GMT

 ಬೆಂಗಳೂರು, ಸೆ.1: ದಲಿತ ಸಮುದಾಯದ ಮೇಲ್ಮನೆ ಸದಸ್ಯ ಆರ್.ಬಿ. ತಿಮ್ಮಾಪುರ ಸಚಿವರಾಗಿ ಅಧಿಕಾರ ಸ್ವೀಕರಿಸುವ ಮೊದಲೇ ಸಂಕಷ್ಟ ಎದುರಾಗಿದ್ದು, ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ತಿಮ್ಮಾಪುರ ವಿರುದ್ಧ ದೂರು ನೀಡಿದೆ.

ರಾಜಭವನಕ್ಕೆ ತುರ್ತು ಭೇಟಿ ನೀಡಿದ ಸಚಿವ ಟಿಬಿ ಜಯಚಂದ್ರ ಅವರು ಸಚಿವ ಸ್ಥಾನ ಪಡೆಯಲು ಸಜ್ಜಾಗಿರುವ ತಿಮ್ಮಾಪುರ ವಿರುದ್ದ ಕೇಳಿ ಬಂದಿರುವ ಸುಳ್ಳು ವಿಳಾಸ ನೀಡಿ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಿದ್ದ ಆರೋಪಕ್ಕೆ ಸಂಬಂಧಿಸಿ ರಾಜ್ಯಪಾಲ ವಿಆರ್ ವಾಲಾಗೆ ಸ್ಪಷ್ಟನೆ ನೀಡಿದ್ದಾರೆ. ಆತುರಾತುರವಾಗಿ ತಿಮ್ಮಾಪುರ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ರಾಜ್ಯಪಾಲರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ರೇಸ್ ಕೋರ್ಸ್‌ನಲ್ಲಿರುವ ಬಿ.ರಮಾನಾಥ ರೈ ಅವರ ನಿವಾಸಕ್ಕೆ ತೆರಳಿ ಪುಷ್ಪ ಗುಚ್ಛ ನೀಡಿ ಶುಭಾಶಯ ಕೋರಿದ್ದಾರೆ. ಈ ಮೂಲಕ ರೈ ಗೃಹ ಸಚಿವರಾಗಲಿದ್ದಾರೆಂಬ ಸುದ್ದಿಗೆ ಪುಷ್ಠಿ ಬಂದಿದೆ.

ಸಿದ್ದರಾಮಯ್ಯ ನೇತೃತ್ವದ ಸರಕಾರದ ಸಚಿವ ಸಂಪುಟದ ವಿಸ್ತರಣೆ ಇಂದು ಸಂಜೆ 5 ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿದೆ. ಎಚ್‌ಎಂ ರೇವಣ್ಣ, ಗೀತಾ ಮಹದೇವಪ್ರಸಾದ್ ಹಾಗೂ ಆರ್‌ಬಿ ತಿಮ್ಮಾಪುರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ತಿಮ್ಮಾಪುರ ವಿರುದ್ಧ ಪ್ರತಿಪಕ್ಷ ಬಿಜೆಪಿ ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರು ಸಚಿವ ಸಂಪುಟ ಸೇರುತ್ತಾರೋ ಎಂಬ ಕುತೂಹಲ ಮನೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News