ರಮಾನಾಥ ರೈ ಅವರಿಗೆ ಗೃಹ ಖಾತೆ ?

Update: 2017-09-04 15:31 GMT

ಬೆಂಗಳೂರು, ಸೆ.1: ನಿರೀಕ್ಷೆಯಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರಿಗೆ ಗೃಹ ಖಾತೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.

ರಮಾನಾಥ ರೈ ಅವರಿಗೆ ಗೃಹ ಖಾತೆ ನೀಡುವುದು ನಿಶ್ಚಿತ ಎಂಬುದಕ್ಕೆ ಪುಷ್ಠಿ ನೀಡುವಂತೆ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಶುಕ್ರವಾರ ಮಧ್ಯಾಹ್ನ ಇಲ್ಲಿನ ರೇಸ್‌ಕೋರ್ಸ್ ರಸ್ತೆಯಲ್ಲಿನ ರಮಾನಾಥ್ ರೈ ನಿವಾಸಕ್ಕೆ ತೆರಳಿ ಸಮಾಲೋಚನೆ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆ ಹಿನ್ನೆಲೆಯಲ್ಲಿ ತಮ್ಮನ್ನು ಭೇಟಿ ಆಗುತ್ತಿದ್ದೇನೆಂದು ಸ್ಪಷ್ಟಪಡಿಸಿರುವ ಕೆಂಪಯ್ಯ, ಸುಮಾರು 15 ನಿಮಿಷಗಳಿಗೂ ಹೆಚ್ಚು ಕಾಲ, ರೈ ಅವರೊಂದಿಗೆ ಚರ್ಚೆ ನಡೆಸಿದ್ದಾರೆಂದು ತಿಳಿದು ಬಂದಿದೆ. ರಮಾನಾಥ ರೈ ಅವರಿಗೆ ಗೃಹ ಖಾತೆ ದೊರೆಯುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಅವರ ನಿವಾಸದಲ್ಲಿ ಸಂಭ್ರಮ ಮನೆಮಾಡಿತ್ತು.

ರೇವಣ್ಣಗೆ ಅರಣ್ಯ, ತಿಮ್ಮಾಪೂರ್‌ಗೆ ಅಬಕಾರಿ, ಗೀತಾಗೆ ಸಹಕಾರ: ನೂತನವಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿರುವ ಮೇಲ್ಮನೆ ಸದಸ್ಯರಾದ ಎಚ್.ಎಂ.ರೇವಣ್ಣ ಅವರಿಗೆ ಅರಣ್ಯ ಖಾತೆ, ಆರ್.ಬಿ.ತಿಮ್ಮಾಪೂರ್ ಅವರಿಗೆ ಅಬಕಾರಿ ಹಾಗೂ ಶಾಸಕ ಗೀತಾ ಮಹದೇವಪ್ರಸಾದ್ ಅವರಿಗೆ ಸಹಕಾರ ಖಾತೆ ನೀಡುವುದು ಸಾಧ್ಯತೆಗಳಿವೆ.

ನಾಲ್ವರಿಗೆ ಸಂಪುಟ ದರ್ಜೆಗೆ ಭಡ್ತಿ: ರಾಜ್ಯ ಖಾತೆ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ, ಪ್ರಮೋದ್ ಮಧ್ವರಾಜ್, ರುದ್ರಪ್ಪ ಲಮಾಣಿ, ಈಶ್ವರಖಂಡ್ರೆ ಅವರಿಗೆ ಸಂಪುಟ ದರ್ಜೆ ಸಚಿವರನ್ನಾಗಿ ಭಡ್ತಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಚ್.ವೈ.ಮೇಟಿ ರಾಜೀನಾಮೆ ಹಾಗೂ ಎಚ್.ಎಸ್.ಮಹದೇವ ಪ್ರಸಾದ್ ಅಕಾಲಿಕ ನಿಧನದಿಂದ ತೆರವಾಗಿದ್ದ ಮೂರು ಸ್ಥಾನಗಳನ್ನು ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟ ಭರ್ತಿಯಾಗಲಿದೆ.

ಸಚಿವ ಸ್ಥಾನ ಕೈತಪ್ಪಿದವರ ಅಸಮಾಧಾನ

‘ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದ ತಿಪಟೂರು ಕ್ಷೇತ್ರದ ಶಾಸಕ ಕೆ.ಷಡಕ್ಷರಿ, ಮಳವಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮೇಲ್ಮನೆ ಸದಸ್ಯೆ ಮೋಟಮ್ಮ, ಅಫ್ಜಲ್‌ಪುರ ಕ್ಷೇತ್ರದ ಶಾಸಕ ಮಾಲಿಕಯ್ಯ ಗುತ್ತೇದಾರ್ ಸೇರಿದಂತೆ ಇನ್ನಿತರರು ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News