ಅಕ್ಷರಧಾಮ ಮಾದರಿಯಲ್ಲಿ ಕೂಡಲ ಸಂಗಮ ಅಭಿವೃದ್ಧಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-09-01 10:50 GMT

ಬೆಂಗಳೂರು, ಸೆ.1: ಕೂಡಲಸಂಗಮ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಸ್ತು ಸಂಗ್ರಹಾಲಯ ಸ್ಥಾಪಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ವಸ್ತು ಸಂಗ್ರಹಾಲಯ ಸ್ಥಾಪನೆಗೆ ಸಲಹೆ, ಸೂಚನೆ ಪಡೆಯಲು ತಜ್ಞರ ಸಮಿತಿ ರಚಿಸಲು ಸಭೆ ತೀರ್ಮಾನಿಸಿದ್ದು, ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬಸವಣ್ಣ ಮತ್ತಿತರ ಶರಣರು ಪ್ರತಿಪಾದಿಸಿದ ವಿಚಾರಧಾರೆಗಳನ್ನು ಪ್ರವಾಸಿಗರಿಗೆ ಮನಮುಟ್ಟುವಂತೆ ವಿವರಿಸುವುದು ವಸ್ತು ಸಂಗ್ರಹಾಲಯದ ಉದ್ದೇಶವಾಗಬೇಕು ಎಂದ ಅವರು, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು, ಸಮ ಸಮಾಜದ ನಿರ್ಮಾಣ ಕುರಿತು ಬಸವಣ್ಣ ಅವರು ಹೇಳಿದ್ದರು. ಇದೂ ಸೇರಿದಂತೆ ಅವರ ಎಲ್ಲ ವಿಚಾರಧಾರೆ ವಿಶ್ವದ ಗಮನ ಸೆಳೆಯುವ ವ್ಯವಸ್ಥೆ ವಸ್ತು ಸಂಗ್ರಹಾಲಯದಲ್ಲಿರಬೇಕು ಎಂದು ಹೇಳಿದರು.

ವಸ್ತು ಸಂಗ್ರಹಾಲಯ ಅಭಿವೃದ್ಧಿಗೆ 84 ಕೋಟಿ ರೂ. ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದರು.

ಅಕ್ಷರ ಧಾಮದ ಮಾದರಿಯಲ್ಲಿ ನಿರ್ಮಾಣವಾಗುವ ವಸ್ತು ಸಂಗ್ರಹಾಲಯದಲ್ಲಿ ಅಧ್ಯಯನ  ಕೇಂದ್ರ, ಬಸವಣ್ಣರ ಸಂದೇಶಗಳು, ಹಂಪಿ ಮಾದರಿಯ ಸಾಲುಗಂಬಗಳು, ಶರಣ ಗ್ರಾಮ ಹೀಗೆ ಪ್ರತಿಯೊಂದು ಇರಲಿದೆ. ಕೂಡಲ ಸಂಗಮದ ಅಭಿವೃದ್ದಿಗೆ ಸುಮಾರು 140 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.

ಸಭೆಯಲ್ಲಿ ಸಚಿವ ಎಂ.ಬಿ.ಪಾಟೀಲ್, ಶಾಸಕರಾದ ಶಿವಾನಂದ ಪಾಟೀಲ್, ಎಸ್.ಆರ್.ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News