ವಿಟಿಯು ವಿರುದ್ಧ ತರಗತಿ ಬಹಿಷ್ಕರಿಸಿ ಬೀದಿಗಿಳಿದ ವಿದ್ಯಾರ್ಥಿಗಳು
ಬೆಂಗಳೂರು, ಸೆ.1: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾನಿಲಯ(ವಿಟಿಯು) ತಪ್ಪುಗಳಿಂದ ಕನಸುಗಳನ್ನು ಹೊತ್ತ 50 ಸಾವಿರಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರದಲ್ಲಿದೆ. ಕೂಡಲೇ ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಐಡಿಎಸ್‌ಒ, ವಿಟಿಯು ವಿದ್ಯಾರ್ಥಿಗಳ ಹೋರಾಟ ಸಮಿತಿಯ ಕಾರ್ಯಕರ್ತರು ಮತ ಪ್ರದರ್ಶನ ನಡೆಸಿದರು.
ಶುಕ್ರವಾರ ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ನೂರಾರು ವಿದ್ಯಾರ್ಥಿಗಳು, ವಿಟಿಯು ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ 160ಕ್ಕೂ ಹೆಚ್ಚು ಕಾಲೇಜುಗಳಿಗೆ ಬೀಗ ಜಡಿದು, ಬೀದಿಗಿಳಿದ ವಿದ್ಯಾರ್ಥಿಗಳು 2010 ಸ್ಕೀಮ್ (ನಾನ್-ಸಿಬಿಸಿಎಸ್) ವಿದ್ಯಾರ್ಥಿಗಳಿಗೆ ಇಯರ್ ಬ್ಯಾಕ್ ಹಾಗೂ ಕ್ರಿಟಿಕಲ್ ಇಯರ್ ಬ್ಯಾಂಕ್‌ನ್ನು ತೆಗೆದು ಹಾಕುವಂತೆ ಮತ್ತು ಸಿಬಿಸಿಎಸ್ ವಿದ್ಯಾರ್ಥಿಗಳಿಗೆ ಸಪ್ಲಿಮೆಂಟರಿ ಪರೀಕ್ಷೆಯನ್ನು ನೀಡಬೇಕೆಂದು ಒತ್ತಾಯಿಸಿದರು.
ಇತ್ತೀಚೆಗೆ ವಿಟಿಯುನ ವಿದ್ಯಾರ್ಥಿಗಳಿಗೆ ಪರೀಕ್ಷಾ ಫಲಿತಾಂಶವು ಐದು ತಿಂಗಳು ತಡವಾಗಿ ಘೋಷಣೆಯಾಗಿತ್ತು. ಅಲ್ಲದೆ, ಮರು ಮೌಲ್ಯಮಾಪನದ ಫಲಿತಾಂಶವು ಪರೀಕ್ಷೆಗೆ ಇನ್ನು ಕಲವೇ ಗಂಟೆಗಳು ಉಳಿದಿರುವಂತೆ ಪ್ರಕಟಿಸಲಾಗಿತ್ತು. ಮತ್ತೊಂದೆಡೆ, ಕ್ರಾಷ್ ಸೆಮಿಸ್ಟರ್‌ನ ವಿದ್ಯಾರ್ಥಿಗಳು ಕೇವಲ 50ದಿನಗಳಲ್ಲಿ 16ರಿಂದ 20 ಪರೀಕ್ಷೆಗಳನ್ನು ಬರೆದಿರುವುದಲ್ಲದೆ, ಒಂದೇ ದಿನ 2 ಪರೀಕ್ಷೆ ಎದುರಿಸುವಂತಾಗಿತ್ತು ಎಂದು ಆರೋಪಿಸಲಾಗಿದೆ.
ಈ ವೇಳೆ ಮಾತನಾಡಿದ ಎಐಡಿಎಸ್‌ಒ ಉಪಾಧ್ಯಕ್ಷ ರವಿನಂದನ್, ವಿಟಿಯು ತಪ್ಪುಗಳಿಂದ ವಿದ್ಯಾರ್ಥಿಗಳ ಜೀವನ ಅತಂತ್ರ ಸ್ಥಿತಿಯಲ್ಲಿದೆ. ಒಂದು ತಿಂಗಳಿನಿಂದ ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಬೀದಿಗಿಳಿದಿದ್ದಾರೆ. ಆದರೆ, ವಿಟಿಯು ತಾನು ಮಾಡಿರುವ ತಪ್ಪನ್ನು ಸರಿಪಡಿಸಲು ಮೀಣ ಮೇಷ ಎಣಿಸುತ್ತಿದೆ.
ಹೀಗಾಗಿ ರಾಜ್ಯಾದ್ಯಂತ ವಿದ್ಯಾರ್ಥಿಗಳು ಇಂದು ವಿಧಿಯಿಲ್ಲದೇ ತರಗತಿಗಳನ್ನು ಬಷ್ಕರಿಸಿ ಹೋರಾಟಕ್ಕಿಳಿಯುವಂತಾಗಿದೆ ಎಂದರು.
ಈಗ 8 ದಿನಗಳ ಕಾಲಾವಕಾಶವನ್ನು ವಿಟಿಯು ಅಧಿಕಾರಿಗಳು ಕೇಳಿದ್ದು, ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಈಗಲಾದರೂ ವಿವಿ ನಿದ್ದೆಯಿಂದ ಎಚ್ಚೆತ್ತು ವಿದ್ಯಾರ್ಥಿಗಳ ಸಮಸ್ಯೆಗೆ ಸೂಕ್ತ ಪರಿಹಾಎರ ಕೊಡಬೇಕು ಎಂದು ಆಗ್ರಹಿಸಿದರು.
ಹೋರಾಟ ಸಮಿತಿ ಸಹ ಸಂಚಾಲಕ ಶ್ರವಣ್ ಕುಮಾರ್ ಮಾತನಾಡಿ, ನಿಗದಿತ ಅವಧಿಯ ಒಳಗೆ ವಿಟಿಯು ತನ್ನ ತಪ್ಪುಗಳನ್ನು ಸರಿಪಡಿಸದಿದ್ದರೆ ವಿದ್ಯಾರ್ಥಿಗಳು ಕಾನೂನು ಉಲ್ಲಂಘನೆ ಹೋರಾಟಕ್ಕೂ ಸಿದ್ಧರಾಗಲಿದ್ದು, ಅದರ ಪೂರ್ಣ ಜವಾಬ್ದಾರಿಯನ್ನು ವಿಟಿಯು ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಅಜಯ್ ಕಾಮತ್, ಕೌಶಿಕ್, ಸಿತಾರಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.