ನೋಟು ಅಪಮೌಲ್ಯೀಕರಣದಿಂದ ದೇಶದ ಆರ್ಥಿಕತೆಯಲ್ಲಿ ಕುಸಿತ: ಸಚಿವ ಆರ್.ವಿ.ದೇಶಪಾಂಡೆ
ಬೆಂಗಳೂರು, ಸೆ.1: ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಯ 48ನೆ ಸಭೆಯು ಒಟ್ಟು 3,596 ಕೋಟಿ ರೂ.ಬಂಡವಾಳ ಹೂಡಿಕೆಯ ವಿವಿಧ ಯೋಜನೆಗಳಿಗೆ ಒಪ್ಪಿಗೆ ನೀಡಿದ್ದು, 3842 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋರಮಂಗಲದಲ್ಲಿ 1,110ಕೋಟಿ ರೂ.ಗಳ ವೆಚ್ಚದಲ್ಲಿ ಮೆ.ಒವಿಎಸ್. ಮೋಟರ್ಸ್ ಲಿ., ನಾಗಾವಾರದ ಗ್ರೀನ್ ಹಾರ್ಟ್ 4ನೆ ಹಂತದಲ್ಲಿ 810ಕೋಟಿ ರೂ.ವೆಚ್ಚದ ಐಕೆಇಎ ಇಂಡಿಯ ಪ್ರೈ.ಲಿ., ಸರ್ಜಾಪುರ ರಸ್ತೆ, ಬೆಳಂದೂರು ಗೇಟ್ ಬಳಿ 710 ಕೋಟಿ ರೂ.ವೆಚ್ಚದಲ್ಲಿ ಮೆ: ಶಾಹಿ ಎಕ್ಸೃ್ಪೋರ್ಟ್ ಪ್ರೈ.ಲಿ., ಮಂಗಳೂರಿನಲ್ಲಿ 966 ಕೋಟಿ ರೂ. ವೆಚ್ಚದ ಮೆ:ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿ., ಯೋಜನೆಗಳಿಗೆ ಉನ್ನತ ಮಟ್ಟದ ಸಮಿತಿಯು ಒಪ್ಪಿಗೆ ನೀಡಿದೆ ಎಂದು ಮಾಹಿತಿ ನೀಡಿದರು.
ನೋಟು ಅಪಮೌಲ್ಯೀಕರಣದಿಂದ ಆರ್ಥಿಕ ಹಿನ್ನಡೆ: ಐದು ನೂರು ಮತ್ತು ಸಾವಿರ ರೂ. ಮುಖಬೆಲೆಯ ನೋಟು ಅಪಮೌಲ್ಯೀಕರಣದಿಂದ ದೇಶದಲ್ಲಿ ತೀವ್ರ ಆರ್ಥಿಕ ಹಿನ್ನೆಡೆ ಉಂಟಾಗಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ಇದೇ ಸಂದರ್ಭದಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರ ಸರಕಾರದ ನೋಟು ಅಪಮೌಲ್ಯೀಕರಣದ ಉದ್ದೇಶ ಸಂಪೂರ್ಣವಾಗಿ ವಿಫಲವಾಗಿದೆ. 2014ರಿಂದ ದೇಶದ ಆರ್ಥಿಕ ಸ್ಥಿತಿ ಉತ್ತಮಗೊಂಡು ಜಿಡಿಪಿ ಶೇ. 6ಕ್ಕೆ ಏರಿತ್ತು. ಆದರೆ, ನೋಟು ಅಮಾನ್ಯಿಕರಣದ ಬಳಿಕ ಕಳೆದ 40 ತಿಂಗಳ ಅವಧಿಯಲ್ಲಿ ಕುಸಿಯತೊಡಗಿ ಶೇ.2ಕ್ಕೆ ಇಳಿದಿದೆ ಎಂದು ಅವರು ಟೀಕಿಸಿದರು.