×
Ad

ಬೆಂಗಳೂರು : ಧಾರಾಕಾರ ಮಳೆಗೆ ಜನತತ್ತರ

Update: 2017-09-02 18:29 IST

ಬೆಂಗಳೂರು, ಸೆ. 2: ಕಳೆದ ಎರಡು ವಾರಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಮಳೆ ಶುಕ್ರವಾರ ಮಧ್ಯರಾತ್ರಿ ಅಬ್ಬರಿಸಿ ಸುರಿದಿದೆ. ಸಿಡಿಲು ಗುಡುಗು ಸಹಿತ ಸುರಿದ ಧಾರಾಕಾರ ಮಳೆ ಉದ್ಯಾನನಗರಿಯ ನಿವಾಸಿಗಳ ನಿದ್ದೆಗೆಡಿಸಿದೆ.

ಶುಕ್ರವಾರ ರಾತ್ರಿ 1 ಗಂಟೆಯಿಂದ ಬೆಳಗ್ಗೆ 9 ಗಂಟೆಯವರೆಗೆ ಸುರಿದ ಮಹಾಮಳೆಗೆ ನಗರದ ನಾನಾ ಭಾಗಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಸಂಪಂಗಿರಾಮನಗರ, ಮಲ್ಲೇಶ್ವರಂ, ಜೆ.ಸಿ.ನಗರ, ಆರ್.ಟಿ.ನಗರ, ಹೆಎಚ್‌ಎಸ್‌ಆರ್ ಲೇಔಟ್, ಮೆಜೆಸ್ಟಿಕ್, ಕಲಾಸಿಪಾಳ್ಯ, ಬಾಪೂಜಿ ನಗರ, ಚಾಮರಾಜಪೇಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಹಾಮಳೆಗೆ ಜನ ತತ್ತರಿಸಿಹೋಗಿದ್ದಾರೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ರಾತ್ರಿಯಲ್ಲ ನಿದ್ದೆಯಿಲ್ಲದೆ ಕಾಲದೂಡಬೇಕಾಯಿತು. ಬಿಟಿಎಂ ಲೇಔಟ್‌ನ ಕೇಂದ್ರೀಯ ಅಬಕಾರಿ ಮತ್ತು ಸೀಮಾ ಸುಂಕ ವಸತಿ ಇವುಗಳ ಸಮೀಪ ಕಿರಿದಾಗಿ ನಿರ್ಮಿಸಿರುವ ರಾಜಕಾಲುವೆಗೆ ಕಟ್ಟಡದ ಅವಶೇಷಗಳನ್ನು ಸುರಿದಿರುವ ಪರಿಣಾಮ ನಿನ್ನೆ ರಾತ್ರಿ ಬಂದ ಮಳೆನೀರು ವಸತಿ ಗೃಹಗಳಿಗೆ ನುಗ್ಗಿ ಅಲ್ಲಿನ ನಿವಾಸಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.

ಬಿಟಿಎಂ ಲೇಔಟ್‌ನ ನಾಗಾರ್ಜುನ ಅಪಾರ್ಟ್‌ಮೆಂಟ್ ಸೆಲ್ಲರ್ ಕೂಡ ಮಳೆಯಿಂದ ಜಲಾವೃತಗೊಂಡಿದೆ. ನಗರದ ಚಂದ್ರ ಲೇಔಟ್, ಗಿರಿನಗರ, ಬನಶಂಕರಿ, ಲಾಲ್ಬಾಗ್, ವಿಲ್ಸನ್ ಗಾರ್ಡನ್, ಹೊಂಗಸಂದ್ರದಲ್ಲಿನ ಸ್ಲಂನ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿದ್ದು, ಜನ ಇಡೀ ರಾತ್ರಿ ಮಳೆ ನೀರನ್ನು ಹೊರಹಾಕುವ ಕಾರ್ಯದಲ್ಲಿ ನಿರತರಾಗಿದ್ದರು.

ಇನ್ನು ಎರಡು ದಿನ ಮಳೆ: ರಾಯಲಸೀಮ ಮತ್ತು ತಮಿಳುನಾಡಿನಲ್ಲಿ ವಾಯುಭಾರ ಕುಸಿತದಿಂದಾಗಿ ಶುಕ್ರವಾರ ಮಧ್ಯರಾತ್ರಿ 3 ಸೆ.ಮೀ.ಮಳೆಯಾಗಿದ್ದು, ಇನ್ನೂ ಎರಡು ಮೂರು ದಿನ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸುಂದರ್ ಮೇತ್ರಿ ಹೇಳಿದ್ದಾರೆ.

ಪಾರ್ಥನೆಗೂ ಅಡ್ಡಿ:  ಬಕ್ರೀದ್ ಹಬ್ಬದ ಅಂಗವಾಗಿ ಶನಿವಾರ ಬೆಳಗ್ಗೆ ನಗರದ ಚಾಮರಾಜಪೇಟೆಯ ಈದ್ಗಾ ಮೈದಾನ ಸೇರಿದಂತೆ, ವಿವಿಧ ಮೈದಾನಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಮಳೆ ಅಡ್ಡಿಯುಂಟುಮಾಡಿತು. ಮೈದಾನಗಳಲ್ಲಿ ನಿಂತಿದ್ದ ನೀರಿನಿಂದಾಗಿ ಸಮೀಪದ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಬೇಗೂರು ಕೆರೆ ಕೋಡಿ: ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಬೇಗೂರು ಕೆರೆ ತುಂಬಿ ಕೋಡಿ ಹರಿಯಿತು. ಇದರ ಪರಿಣಾಮ ಕೋಡಿಯ ಪಕ್ಕದಲ್ಲಿರುವ ವಿಶ್ವಪ್ರಿಯ ಲೇಔಟ್‌ನ ಮನೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಇತ್ತ ಹರಿಯುತ್ತಿದ್ದ ಕೋಡಿಯ ನೀರಿನಲ್ಲಿ ಯುವಕರು ಕುಣಿದು ಕುಪ್ಪಳಿಸಿದರು.

ವಾಹನ ಸವಾರರ ಪರದಾಟ: ನಗರದಲ್ಲಿ ಮಳೆ ಸೃಷ್ಟಿಸಿರುವ ಅವಾಂತರಕ್ಕೆ ವಾಹನ ಸವಾರರು ಹೈರಾಣಾಗಿದ್ದಾರೆ. ನಗರದ ಬಹುತೇಕ ರಸ್ತೆಗಳು ಕರೆಯಂತಾಗಿರುವುದರಿಂದ ವಾಹನ ಸವಾರರ ಪಡಿಪಾಟಲು ಹೇಳತೀರದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News