ಪ್ರತ್ಯೇಕ ಲಿಂಗಾಯತ ಧರ್ಮ ಘೋಷಣೆಗೆ ಒತ್ತಾಯಿಸಿ ನಾಲ್ಕು ಬೃಹತ್ ಸಮಾವೇಶ: ಜಯಮೃತ್ಯುಂಜಯ ಸ್ವಾಮೀಜಿ

Update: 2017-09-02 14:18 GMT

ಬೆಂಗಳೂರು, ಜು.2: ಪ್ರತ್ಯೇಕ ಲಿಂಗಾಯತ ಧರ್ಮ ಘೋಷಣೆಗೆ ಒತ್ತಾಯಿಸಿ ಮಹಾರಾಷ್ಟ್ರದ ಲಾತೂರ್ ಸೇರಿ ರಾಜ್ಯದ ನಾಲ್ಕು ಕಡೆಗಳಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗುವುದು ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರತ್ಯೇಕ ಲಿಂಗಾಯತ ಧರ್ಮ ಘೋಷಣೆಗೆ ಒತ್ತಾಯಿಸಿ ಈಗಾಗಲೇ ಹಲವು ಸಮಾವೇಶಗಳು ನಡೆದಿವೆ. ಅದೇ ರೀತಿಯಾಗಿ ಸೆ.3ರಂದು ಲಾತೂರ್, ಸೆಪ್ಟೆಂಬರ್‌ನಲ್ಲಿ ಕಲಬುರಗಿ, ಬಿಜಾಪುರ ಹಾಗೂ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಲಿಂಗಾಯತ ಹಾಗೂ ವೀರಶೈವ ಪ್ರತ್ಯೇಕ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಗೊಂದಲವನ್ನು ನಿವಾರಣೆ ಮಾಡಲು ರಾಜ್ಯ ಸರಕಾರ ತಜ್ಞರ ಸಮಿತಿಯನ್ನು ನೇಮಕ ಮಾಡಿ ಅದರ ವರದಿಯ ಆಧಾರದ ಮೇಲೆ ಕೇಂದ್ರಕ್ಕೆ ಶಿಫಾರಸ್ಸು ಸಲ್ಲಿಸಬೇಕೆಂದು ತಿಳಿಸಿದರು.

ಲಿಂಗಾಯತ ಧರ್ಮ ಸಂವಿಧಾನ ಮಾನ್ಯತೆ ಹೋರಾಟ ಸಮಿತಿ ಸಂಚಾಲಕ ಎಸ್.ಎಂ.ಜಾಮದಾರ್ ಮಾತನಾಡಿ, ಬೌದ್ಧ, ಜೈನ್ ಹಾಗೂ ಸಿಖ್ ಧರ್ಮಗಳಂತೆಯೇ ಲಿಂಗಾಯತ ಧರ್ಮವೂ ಸ್ವತಂತ್ರ ಧರ್ಮವಾಗಿದೆ. ಹೀಗಾಗಿ, ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಲು ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಹಾಗೂ ತಮಿಳುನಾಡು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳಲಾಗುವುದು. ಅಲ್ಲದೆ, ಈಗಾಗಲೇ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕರ್ನಾಟಕ ಸಿಎಂಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದ ಚರ್ಚೆಗೆ ನಾವು ಯಾರಿಗೂ ಆಹ್ವಾನ ನೀಡಿಲ್ಲ. ಆದರೆ, ಅವರಾಗಿಯೇ ಬಂದರೆ ನಾವು ಚರ್ಚೆಗೆ ಸಿದ್ಧರಿದ್ದೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News