ಮಹತ್ವ ಕಳೆದುಕೊಳ್ಳುತ್ತಿರುವ ಹಾಸ್ಯ: ಪ್ರೊ.ಎಂ.ಕೃಷ್ಣೇಗೌಡ ವಿಷಾದ

Update: 2017-09-02 15:06 GMT

ಬೆಂಗಳೂರು, ಸೆ. 2:ಇತ್ತೀಚಿನ ದಿನಗಳಲ್ಲಿ ಕೆಲವು ಹಾಸ್ಯ ನಟರು ಸಂಸ್ಕಾರವಿಲ್ಲದೇ ಪದಬಳಸುತ್ತಿರುವುದರಿಂದ ಹಾಸ್ಯದ ಮಹತ್ವ ಕಳೆದುಕೊಳ್ಳುತ್ತಿದೆ ಎಂದು ವಿಮರ್ಶಕ ಪ್ರೊ.ಎಂ.ಕೃಷ್ಣೇಗೌಡ ವಿಷಾದ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಶನಿವಾರ ವಿಕ್ರಮ್ ಪ್ರಕಾಶನ ವತಿಯಿಂದ ಹಮ್ಮಿಕೊಂಡಿದ್ದ ಎಂಎಸ್‌ಎನ್ ಅವರ 50ನೆ ಕೃತಿ ಮದಗಜಗಮನೆ(ನಗೆಬರಹ)ವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಒಂದು ಭಾಷೆ ಬಳಸುವಾಗ ಯಾವ ಪದ ಬಳಸಬೇಕು, ಹೇಗೆ ಮಾತನಾಡಬೇಕು ಎಂಬ ಎಚ್ಚರಿಕೆ ಇರಬೇಕು. ಬಳಸುವ ಕಲಾವಿದರಿಗೆ ಹಾಗೂ ಬರಹಗಾರರಿಗೆ ಬದ್ಧತೆ ಇರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಹಾಸ್ಯ ನಟರ ಸಂಭಾಷಣೆಯಲ್ಲಿ ಬದ್ಧತೆ ಕಣ್ಮರೆಯಾಗುತ್ತಿದೆ ಎಂದರು.

ಲೇಖಕ ಎಚ್. ಡುಂಡಿರಾಜ್ ಮಾತನಾಡಿ, ಎಂಎಸ್‌ಎನ್ ಅವರ ಐವತ್ತನೆ ಕೃತಿ ಮದಗಜಗಮನೆಯಲ್ಲಿ ಆರೋಗ್ಯಕರ ಹಾಸ್ಯ ಮತ್ತು ವಿಡಂಬನೆಗೆ ಮಾದರಿಯಾಗುವಂತಹ 34 ಉತ್ತಮ ಲೇಖನಗಳಿವೆ. ಈಗಾಗಲೇ ಟಿವಿ ಧಾರಾವಾಹಿಗಳಿಗಾಗಿ 8 ಸಾವಿರಕ್ಕೂ ಹೆಚ್ಚು ಸಂಚಿಕೆಗಳು, 9 ಸಾವಿರ ಕಥೆಗಳನ್ನು ರಚಿಸಿದ್ದಾರೆ. ಜತೆ ಜತೆಗೆ ದೇಶ ವಿದೇಶಗಳಲ್ಲಿ ಹಾಸ್ಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಈ ಕೃತಿಯಲ್ಲಿ ರಮ್ ಕುಡಿಯುವ ಆನೆಯಿಂದ ಹಿಡಿದು ಕಳೆದ ವರ್ಷ ನೋಟ್ ರದ್ದತಿಯವರೆಗಿನ ಇತ್ತೀಚಿನ ವಿದ್ಯಮಾನಗಳನ್ನು ಹಿಡಿದಿಟ್ಟಿದ್ದಾರೆ. ಎಂ.ಎಸ್.ಎನ್ ಅವರ ಲೇಖನಗಳು ನಗೆಯ ಕಾರಂಜಿಯನ್ನೇ ಚಿಮ್ಮಿಸಿದರೂ ಅವುಗಳ ಉದ್ದೇಶ ಕೇವಲ ನಗೆಯಲ್ಲ. ಹಾಸ್ಯ ಅವರಿಗೆ ಒಂದು ಮಾರ್ಗವಾಗಿದ್ದು, ಅದರ ಮೂಲಕ ಆರೋಗ್ಯಕರ ಪರಿಸರ, ಸ್ವಸ್ಥ ಸಮಾಜ ಮತ್ತು ಉನ್ನತ ಮೌಲ್ಯಗಳ ರಕ್ಷಣೆಗೆ ಸಹಕಾರಿಯಾಗುವಂತಹ ಚಿಂತನೆಗಳನ್ನು ಬಿತ್ತಿದ್ದಾರೆ. ಆದ್ದರಿಂದ ಅವರು ಕನ್ನಡದ ಹಾಸ್ಯ ಲೇಖಕರಲ್ಲಿ ಪ್ರಮುಖರಾಗಿದ್ದಾರೆ ಎಂದರು.

ಲೇಖಕರು ಬದುಕು ಮತ್ತು ಬರಹದಲ್ಲಿ ತಮ್ಮನ್ನು ತಾನೇ ಹಾಸ್ಯಮಾಡಿಕೊಳ್ಳುವುದು. ಹಾಸ್ಯ ಲೇಖಕರಾಗಿ ಮತ್ತು ನಗೆ ಭಾಷಣಕಾರರಾಗಿ ಅವರ ಯಶಸ್ಸಿಗೆ ಕಾರಣವಾಗಿದೆ. ನಗುವಿನ ನಡುವೆ ಅವರ ಅಪಾರ ಜ್ಞಾನ ಹಾಗೂ ಜೀವನಾನುಭವಗಳು ಅವರ ಕೃತಿಗಳಲ್ಲಿ ಎದ್ದು ತೋರುತ್ತವೆ ಎಂದರು.

ಹಾಸ್ಯ ಸಾಹಿತಿ ಎಂ.ಎಸ್. ನರಸಿಂಹಮೂರ್ತಿ ಮಾತನಾಡಿ, ವನಿತೆಯರ ನಡಿಗೆಯನ್ನು ಅನೇಕ ಪ್ರಾಣಿಗಳಿಗೆ ಹೋಲಿಸಲಾಗುತ್ತೆ, ಇಂಗ್ಲಿಷ್‌ನ ಕ್ಯಾಟ್‌ವಾಕ್ ಕನ್ನಡದ ಮದಗಜಗಮನೆ ಪದದ ಅರ್ಥ. ಆದರೆ, ಇದು ಗಜದ ಕತೆ, ಗಮನೆಯ ಕತೆಯಲ್ಲ ಎಂದು ಕತಿಯ ಬಗ್ಗೆ ಸ್ಪಷ್ಟಪಡಿಸಿದರು.

ಈ ಕತಿಯಲ್ಲಿ 1971 ರಿಂದ 2016ರವರೆಗಿನ 45 ವರ್ಷಗಳ ಅವಧಿಯಲ್ಲಿ ರಚಿಸಿ ಪತ್ರಿಕೆಗಳಲ್ಲಿ ಪ್ರಕಟಿಸಿದ ಕೆಲವು ಹಾಸ್ಯ ಪ್ರಸಂಗಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಆಯಾ ಸಂದರ್ಭದಲ್ಲಿ ನನಗನ್ನಿಸಿದ್ದನ್ನು ನಗೆಯ ಮಾತುಗಳಲ್ಲಿ ಪ್ರಸ್ತುತಪಡಿಸಿದ್ದೇನೆ ಎಂದರು.

ವೈ.ವಿ. ಗುಂಡೂರಾವ್ ಮಾತನಾಡಿ, ಎಂ.ಎಸ್.ಎನ್ ಅವರ ಪ್ರತಿಯೊಂದು ಕೃತಿಯೂ ಬರಿ ಹಾಸ್ಯವಲ್ಲದೇ ಪ್ರಮೋದ, ಪ್ರಚೋದನೆ ಅದರ ಜತೆಗೆ ಸಾಮಾಜಿಕ ಕಳಕಳಿಯೂ ಅಡಗಿದೆ. ಆದ್ದರಿಂದ ಹಾಸ್ಯಕ್ಕೆ ಮಾತ್ರ ಬ್ರಾಂಡ್ ಮಾಡಬೇಡಿ ಎಂದು ತಿಳಿಸಿದರು.

ಲೇಖಕರು ಸಾಹಿತ್ಯ ಹಾಗೂ ಹಾಸ್ಯದ ಗುಣಮಟ್ಟವನ್ನು ಇಂದಿಗೂ ಕಾಯ್ದುಕೊಂಡು ಬಂದಿದ್ದಾರೆ. ಆದರೆ, ಹಾಸ್ಯ ಸಾಹಿತಿಗಳು ಇಂದು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಯುವಕರು ಹಾಸ್ಯ ಸಾಹಿತ್ಯದ ಕಡೆಗೆ ಬರುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಚ್ಯುತ್‌ರಾವ್ ಪದಕಿ, ವಿಕ್ರಮ್ ಪ್ರಕಾಶನದ ಹರಿಪ್ರಸಾದ್, ನಿರ್ಮಲಾ ಎನ್. ಮೂರ್ತಿ, ಜಿ.ಮಧುಸೂದನ್, ಉಮಾ ಸುರೇಶ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News