ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ರಾಜ್ಯ ಸರಕಾರ ಚಿಂತನೆ

Update: 2017-09-02 15:12 GMT

ಬೆಂಗಳೂರು, ಸೆ. 2: ತೆಲಂಗಾಣ ಮಾದರಿಯಲ್ಲೆ ರಾಜ್ಯ ಸರಕಾರ ಹೆಣ್ಣು ಮಕ್ಕಳಿಗೆ ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿ ಹಂತದ ವರೆಗೂ ಉಚಿತ ಶಿಕ್ಷಣ ನೀಡಲು ರಾಜ್ಯ ಸರಕಾರ ಮುಂದಾಗಿದೆ.

ಸರಕಾರಿ ಮತ್ತು ಅನುದಾನ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ಹೆಣ್ಣು ಮಕ್ಕಳಿಗೆ ಉಚಿತ ‘ಶಿಕ್ಷಣ ಭಾಗ್ಯ’ ಕಲ್ಪಿಸಲು ರಾಜ್ಯ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, 2019ರ ಶೈಕ್ಷಣಿಕ ವರ್ಷದಿಂದ ಈ ನೂತನ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂದು ಗೊತ್ತಾಗಿದೆ.

ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆ ವಿದ್ಯಾರ್ಥಿನಿಯರು ವಾರ್ಷಿಕ ಶುಲ್ಕವನ್ನು ಭರಿಸಬೇಕು. ಬಳಿಕ ರಾಜ್ಯ ಸರಕಾರ ಹೆಣ್ಣು ಮಕ್ಕಳ ಬ್ಯಾಂಕ್ ಖಾತೆಗಳ ಮೂಲಕ ಹಿಂದಿರುಗಿಸಲಿದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮತ್ತೊಂದು ಜನಪ್ರಿಯ ಯೋಜನೆ ಪ್ರಕಟಿಸಲು ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರ ಉಚಿತ ಲ್ಯಾಪ್‌ಟಾಪ್ ನೀಡಲು ನಿರ್ಧರಿಸಿದ್ದು, ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಇದೀಗ ಮಹಿಳೆಯರ ಸಬಲೀಕರಣ ದೃಷ್ಟಿಯಿಂದ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸರಕಾರ ಮುಂದಾಗಿದೆ.

ರಾಜ್ಯ ಸರಕಾರದ ಈ ಯೋಜನೆಯಿಂದ ರಾಜ್ಯದ ಸುಮಾರು 18 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದ್ದು, ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪ್ರಥಮ ದರ್ಜೆ, ವಿಶ್ವ ವಿದ್ಯಾನಿಲಯಗಳಲ್ಲಿ ಸರಕಾರದಿಂದ ಅನುದಾನ ಪಡೆಯುತ್ತಿರುವ ಎಲ್ಲ ಶಿಕ್ಷಣ ಸಂಸ್ಥೆಗಳು ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಉಚಿತ ಶಿಕ್ಷಣ ನೀಡಲು ಸೂಚನೆ ನೀಡಲಾಗುವುದು. ಅವರ ವಾರ್ಷಿಕ ಶುಲ್ಕವನ್ನು ಸರಕಾರ ಭರಿಸಲಿದೆ ಎಂದು ಹೇಳಲಾಗಿದೆ.

ಹೆಣ್ಣು ಮಕ್ಕಳಿಗೆ ಎಲ್‌ಕೆಜಿಯಿಂದ ಸ್ನಾತಕೋತ್ತರ ಹಂತದ ವರೆಗೂ ಉಚಿತ ಶಿಕ್ಷಣ ನೀಡಲು ವಾರ್ಷಿಕ 120ರಿಂದ 150 ಕೋಟಿ ರೂ.ವೆಚ್ಚವಾಗಲಿದ್ದು, ಹೆಣ್ಣು ಮಕ್ಕಳ ಸಬಲೀಕರಣಕ್ಕೆ ರಾಜ್ಯ ಸರಕಾರ ಉಚಿತ ಶಿಕ್ಷಣ ನೀಡುವ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News