ವಾಸ್ತವದ ವಿವೇಕದ ಕಣ್ಣಲ್ಲಿ-ಕನ್ನಡ

Update: 2017-09-02 18:44 GMT

ಬರಗೂರು ಅವರನ್ನು ಎರಡು ನೆಲೆಗಳಲ್ಲಿ ನಾವು ನೋಡಬಹುದು. ಒಂದು ಬಂಡಾಯ ಚಳವಳಿಯ ಮೂಲಕ. ಇನ್ನೊಂದು ಕನ್ನಡ ಪರ ಹೋರಾಟಗಾರರಾಗಿ. ಕನ್ನಡದ ಕುರಿತಂತೆ ಎಲ್ಲ ಆಯಾಮಗಳಲ್ಲಿ ಮಾತನಾಡುವ ನೈತಿಕ ಹಕ್ಕನ್ನು ಹೊಂದಿದವರು ಬರಗೂರು ರಾಮಚಂದ್ರಪ್ಪ. ಕನ್ನಡದ ವಿಷಯ ಬಂದಾಗ ಭಾವೋದ್ರೇಕದಿಂದ ವರ್ತಿಸುವ ಬದಲು ವಸ್ತುಸ್ಥಿತಿಯ ಅರಿವಿನೊಂದಿಗೆ ಚಿಂತನೆ ನಡೆಸಿ, ಹೋರಾಟ ಕಟ್ಟಬೇಕು ಎಂದು ನಂಬಿದವರು ಮತ್ತು ಹಾಗೆ ನಡೆದವರು. ಈ ಕಾರಣದಿಂದಲೇ, ಬರಗೂರು ಅವರು ಕನ್ನಡದ ಅನುಷ್ಠಾನ, ಸವಾಲುಗಳ ಕುರಿತಂತೆ ಮಾತನಾಡುವಾಗ ಅದನ್ನು ಚಿಂತನಾ ವಲಯ ಗಂಭೀರವಾಗಿ ಆಲಿಸುತ್ತದೆ.

ಖ್ಯಾತ ಲೇಖಕ, ಚಿಂತಕ, ಹೋರಾಟಗಾರ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಬರೆದಿರುವ ಕಿರು ಕೃತಿ 'ಶಿಕ್ಷಣದಲ್ಲಿ ಕನ್ನಡ'. ವಿವಿಧ ಸಂದರ್ಭಗಳಲ್ಲಿ ವಿವಿಧ ಪತ್ರಿಕೆಗಳಿಗಾಗಿ ಬರೆದ ಕೆಲವು ಲೇಖನಗಳು ಇಲ್ಲಿ ಒಂದಾಗಿ ಜೋಡಿಸಲಾಗಿದೆ. ಶಿಕ್ಷಣದಲ್ಲಿ ಕನ್ನಡದ ಸ್ಥಾನ, ಸಮಸ್ಯೆ, ಸವಾಲುಗಳು, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಂವಿಧಾನಾತ್ಮಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ ಬರಹಗಳು ಇಲ್ಲಿವೆ. ಇಲ್ಲಿ ಕೆಲವು ಸಂಗತಿಗಳು ಪುನರುಕ್ತವಾಗಿದೆ. ಬರಗೂರು ಅವರೇ ಹೇಳುವಂತೆ, ಗೋಕಾಕ್ ಸಮಿತಿಯ ಸುತ್ತಮುತ್ತಲ ಸಂಗತಿಗಳು ಮತ್ತು ನ್ಯಾಯಾಲಯದಲ್ಲಿ ನಡೆದ ಮಾತೃಭಾಷಾ ಮಾಧ್ಯಮದ ಕಾನೂನು ಸಮರದ ಸಂಗತಿಗಳು ಪುನರುಕ್ತವಾಗಿವೆ. ಲೇಖನ ರಚಿತವಾದ ಸಂದರ್ಭದಲ್ಲಿ ಈ ವಿಷಯಗಳ ಪ್ರಸ್ತಾಪ ಅಗತ್ಯವಾಗಿತ್ತು ಎನ್ನುವ ಹಿನ್ನೆಲೆಯಲ್ಲಿ ಅವರು ಅದನ್ನು ಪುನರುಕ್ತಗೊಳಿಸಿದ್ದಾರೆ. ಈ ಪುಸ್ತಕದ ಬಹುಪಾಲು ಲೇಖನಗಳಲ್ಲಿ ಸಂವಿಧಾನದ ಮತ್ತು ಕಾನೂನುಗಳ ಪ್ರಸ್ತಾಪವಿದೆ. ಕನ್ನಡ ವಿಷಯದ ಕುರಿತಂತೆ ಬರೆಯುವಾಗ ಎಲ್ಲೂ ಭಾವೋದ್ರೇಕವನ್ನಾಗಲಿ, ಅಂಧಾಭಿಮಾನವನ್ನಾಗಲಿ ತಳೆಯದೆ, ವಾಸ್ತವದ ನೆಲೆಯಲ್ಲಿ ನಿಂತು ಬರಗೂರರು ಬರೆದಿದ್ದಾರೆ.ವಾಸ್ತವದ ವಿವೇಕದೊಂದಿಗೆ ಈ ಕೃತಿ ಮೂಡಿ ಬಂದಿದೆ.

ಇಲ್ಲಿ ಒಟ್ಟು ಹತ್ತು ಲೇಖನಗಳಿವೆ. ಕನ್ನಡ ಸಂಸ್ಕೃತಿ, ಕನ್ನಡ ಮಾಧ್ಯಮ ಮತ್ತು ಸಂವಿಧಾನ, ಕನ್ನಡ ಮಾಧ್ಯಮದ ವಿರುದ್ಧ ಸುಪ್ರೀಂಕೋರ್ಟ್ ತೀರ್ಪು, ಕನ್ನಡ ಮತ್ತು ಸಂಸ್ಕೃತದ ನಡುವಿನ ಸಂಬಂಧ, ಹಿಂದಿ ಹೇರಿಕೆಯ ಇತಿಹಾಸ, ಕಾಲೇಜು ಶಿಕ್ಷಣದಲ್ಲಿ ಕನ್ನಡದ ಸ್ಥಿತಿ, ಮಾತೃ ಭಾಷೆಯ ಅಗತ್ಯ ಮತ್ತು ಅದನ್ನು ಅಳವಡಿಸುವ ಸಂದರ್ಭದಲ್ಲಿರುವ ಸವಾಲು, ಉನ್ನತ ಶಿಕ್ಷಣದಲ್ಲಿ ಉದ್ಯಮದ ವೈಪರೀತ್ಯ ಹೀಗೆ ಕನ್ನಡವನ್ನು ಕೇಂದ್ರವಾಗಿಟ್ಟುಕೊಂಡೇ ಲೇಖನಗಳು ವರ್ತಮಾನದ ಸವಾಲುಗಳನ್ನು ಎದುರಿಸುತ್ತದೆ. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೃತಿಯನ್ನು ಪ್ರಕಟಿಸಿದೆ. ಕೃತಿಯ ಮುಖಬೆಲೆ 60 ರೂಪಾಯಿ. 
 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News