ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ?

Update: 2017-09-03 10:30 GMT

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ, ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ 26 ಕೀಲಿಗಳನ್ನೇ ಬಳಸಿ, ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ, ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ‘ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್’ (ಕೆ.ಪಿ.ರಾವ್ ವಿನ್ಯಾಸ).

ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ, ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.

1999ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ, ಮೊದಲಿಗೆ, ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ, ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸುವ ಕ್ರಮಗಳನ್ನು ಅರಿತುಕೊಳ್ಳಬೇಕು. ತದನಂತರ, ವೇಗದ ಕನ್ನಡ ಟೈಪಿಂಗ್‌ನ್ನು ಅಭ್ಯಾಸ ಮಾಡಬಹುದು.

ಇಂದು ಬಹುತೇಕ ಎಲ್ಲ ಕನ್ನಡಲಿಪಿ ತಂತ್ರಾಂಶಗಳಲ್ಲಿ ಈ ವಿನ್ಯಾಸ ಲಭ್ಯವಿದೆ. ಈ ಮೇಲಿನ ವಿನ್ಯಾಸದಲ್ಲಿ, ಇಂಗ್ಲಿಷ್‌ನ 26 ಅಕ್ಷರಗಳ ಕೀಲಿಗಳಿಗೇ ಕನ್ನಡದ ಎಲ್ಲಾ ಮೂಲ ಅಕ್ಷರಗಳನ್ನು ನಿಗದಿಪಡಿಸಿರುವುದನ್ನು ಗಮನಿಸಿ. ಒಂದು ಇಂಗ್ಲಿಷ್ ಕೀಲಿಸ್ಥಾನದಲ್ಲಿ ‘ಮೇಲೆ’ ಮತ್ತು ‘ಕೆಳಗೆ’ ಎರಡು ಕನ್ನಡದ ಅಕ್ಷರಗಳಿವೆ. ಅವೆರಡೂ ಅಕ್ಷರಗಳಿಗೆ ಇರುವ ಸಂಬಂಧವನ್ನು ಗಮನಿಸಿ. ಅಕ್ಷರಗಳು ವ್ಯಂಜನಗಳಾದರೆ ಅವು ಅಲ್ಪಪ್ರಾಣ ಮತ್ತು ಮಹಾಪ್ರಾಣಗಳಾಗಿರುತ್ತವೆ ಹಾಗೂ ಸ್ವರಗಳಾದರೆ ಅವು ಹ್ರಸ್ವಸ್ವರಗಳು ಮತ್ತು ದೀರ್ಘಸ್ವರಗಳಾಗಿವೆ ಎಂಬುದನ್ನೂ ಸಹ ಗಮನಿಸಿ. ಸಂಬಂಧಿಸಿದ ಇಂಗ್ಲಿಷ್ ಕೀಲಿಯನ್ನು ಒಮ್ಮೆ ಒತ್ತಿದರೆ ಕೆಳಗಿನ ಅಕ್ಷರವೂ, ಅದೇ ಕೀಲಿಯನ್ನು ಶಿಫ್ಟ್ ಹಿಡಿದುಕೊಂಡು ಒತ್ತಿದರೆ ಮೇಲಿನ ಕನ್ನಡ ಅಕ್ಷರವು ಮೂಡುತ್ತದೆ ಎಂಬುದನ್ನು ಎಲ್ಲಾ ಕೀಲಿಗಳು ಸೂಚಿಸುತ್ತಿವೆ ಎಂಬುದನ್ನೂ ಗಮನಿಸಿರಿ.

ಹಾಗಾದರೆ, ಒತ್ತಕ್ಷರಗಳು, ಇಳಿ, ಕೊಂಬು, ಏತ್ವ ಇತ್ಯಾದಿಗಳು ಎಲ್ಲಿ ಎಂದು ಹುಡುಕುತ್ತಿದ್ದೀರಾ? ಅವುಗಳನ್ನು ಪ್ರತ್ಯೇಕವಾಗಿ ನೀವು ಮೂಡಿಸಬೇಕಿಲ್ಲ. ಇರುವ 26 ಕೀಲಿಗಳನ್ನೇ ಬಳಸಿ ಕನ್ನಡವನ್ನು ಉಚ್ಚರಿಸುವ ಕ್ರಮದಲ್ಲಿ ನೀವು ಟೈಪಿಂಗ್ ಮಾಡಿದರೆ ಕನ್ನಡದ ಎಲ್ಲಾ ಸಂಯುಕ್ತಾಕ್ಷರಗಳು, ಒತ್ತಕ್ಷರಗಳು ಎಲ್ಲವನ್ನೂ ಮೂಡಿಸಬಹುದು. ಇದು ಹೇಗೆಂದರೆ, k ಒತ್ತಿದರೆ ಕ ಬರುವಂತೆ,m ಒತ್ತಿದರೆ ಮ ಬರುವಂತೆ ಅಕ್ಷರಸ್ಥಾನ ನಿಗದಿಪಡಿಸಲಾಗಿದೆ. ಹಾಗೆಯೇ, ಸ್ವರಗಳೂ ಸಹ,a ಒತ್ತಿದರೆ ಅ ಬರುವಂತೆ,i ಒತ್ತಿದರೆ ಇ ಬರುವಂತೆ ಹೀಗೆ ಇದೇ ರೀತಿಯಲ್ಲಿ ಇಂಗ್ಲಿಷ್ ಕೀಲಿಗಳ ಸ್ಥಾನದಲ್ಲಿ ಕನ್ನಡದ ಅಕ್ಷರಗಳನ್ನು ನಿಗದಿಸಲಾಗಿದೆ. ಅವೇ ಇಂಗ್ಲಿಷ್ ಕೀಲಿಗಳನ್ನು ಶಿಫ್ಟ್ ಹಿಡಿದುಕೊಂಡು ಒತ್ತಿದರೆ ಅದಕ್ಕೆ ಅನುಗುಣವಾಗಿ ವ್ಯಂಜನ ಕೀಲಿಗಳಾದರೆ ಮಹಾಪ್ರಾಣಗಳು, ಸ್ವರಗಳ ಕೀಲಿಗಳಾದರೆ ದೀರ್ಘ ಸ್ವರಗಳು ಮೂಡುತ್ತದೆ. ಆದುದರಿಂದ, ಕನ್ನಡದ ಅಕ್ಷರಗಳ ಸ್ಥಾನಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಬಹುದು.

ಮೇಲೆ ಹೇಳಿದ್ದೆಲ್ಲವೂ ಮೂಲ ಅಕ್ಷರಗಳನ್ನು ಮೂಡಿಸುವ ವಿಚಾರವಾಯಿತು, ಗುಣಿತಾಕ್ಷರಗಳು ಮತ್ತು ಒತ್ತಕ್ಷರಗಳನ್ನು ಮೂಡಿಸುವ ಬಗೆ ಹೇಗೆ? ಇಂಗ್ಲಿಷ್ ಕೀಲಿಮಣೆಯ k ಅನ್ನು ಒತ್ತಿದರೆ ಕನ್ನಡದ ‘ಕ’ ಮೂಡುತ್ತದೆ,k ಮತ್ತು a ಅನ್ನು ಕ್ರಮವಾಗಿ ಬೆರಳಚ್ಚಿಸಿದರೆ ‘ಕಾ’ ಮೂಡುತ್ತದೆ,k ಮತ್ತು i ಒತ್ತಿದರೆ ‘ಕಿ’ ಮೂಡುತ್ತದೆ. ಇದೇ ಕ್ರಮವನ್ನು ಎಲ್ಲಾ ವ್ಯಂಜನಗಳಿಗೆ ಅನ್ವಯಿಸಿದರೆ ‘ಕಾಗುಣಿತ’ ಅಂದರೆ, ಗುಣಿತಾಕ್ಷರಗಳು ಮೂಡುತ್ತವೆ. ಗುಣಿತಾಕ್ಷರ (ಕಾಗುಣಿತ) ಪಡೆಯಲು ಯಾವುದಾದರೂ ವ್ಯಂಜನವನ್ನು ಒತ್ತಿ ಮತ್ತೆ ಸ್ವರವನ್ನು ಒತ್ತಿದರೆ ಅವೆರಡರ ಗುಣಿತಾಕ್ಷರವು ಮೂಡುತ್ತದೆ. ಉದಾಹರಣೆಗೆ; ‘ಕ’ ಮತ್ತು ‘ಇ’ ಸೇರಿ ‘ಕಿ’ ಆಗುತ್ತದೆ. ಹಾಗೆಯೇ ‘ಯ’ ಮತ್ತು ‘ಓ’ ಸೇರಿ ‘ಯೋ’ ಆಗುತ್ತದೆ. ಎಲ್ಲಾ ವ್ಯಂಜನಗಳ ಗುಣಿತಾಕ್ಷರಗಳನ್ನು ಪಡೆಯಲು ಇದೇ ಕ್ರಮ ಅನುಸರಿಸಬೇಕು.
 ಹಾಗಾದರೆ, ಒತ್ತಕ್ಷರಗಳನ್ನು ಮೂಡಿಸುವುದು ಹೇಗೆ? ಕಾಗುಣಿತ ಮೂಡಿಸುವ ತರ್ಕವೇ ಇಲ್ಲಿಯೂ ಅನ್ವಯಿಸುತ್ತದೆ. ಅಲ್ಲಿ ವ್ಯಂಜನ ಮತ್ತು ಸ್ವರ ಸೇರಿ ತಾನಾಗಿಯೇ ಗುಣಿತಾಕ್ಷರವಾದರೆ. ಇಲ್ಲಿ ಒಂದು ವ್ಯಂಜನ ಮತ್ತೊಂದು ವ್ಯಂಜನದ ಜೊತೆ ಸೇರಿ ಒತ್ತಕ್ಷರವಾಗುತ್ತದೆ. ಆದರೆ, ಒಂದೇ ವ್ಯತ್ಯಾಸ ಎಂದರೆ ಎರಡು ವ್ಯಂಜನ ಸೇರಿಸಲು ನೀವು ಲಿಂಕ್ ಕೀಲಿ ಎಂದು ಕರೆಯಲಾಗುವ ‘ಎಫ್’ ಕೀಲಿಯನ್ನು ಬಳಸಬೇಕು. ಸಂಯುಕ್ತಾಕ್ಷರ ಪಡೆಯಲು ಒಂದು ವ್ಯಂಜನವನ್ನು ಒತ್ತಿದ ನಂತರ ಅರ್ಧಾಕ್ಷರ (ಎಫ್-ಕೀಲಿ) ಚಿನ್ಹೆಯನ್ನು ಒತ್ತಬೇಕು ಆನಂತರ ಮತ್ತೊಂದು ವ್ಯಂಜನವನ್ನು ಒತ್ತಿದರೆ ಎಲ್ಲವೂ ಕೂಡಿ ಸಂಯುಕ್ತಾಕ್ಷರವಾಗುತ್ತದೆ. ಉದಾಹರಣೆಗೆ; ‘ಕ’ ಒತ್ತಿ ಅರ್ಧಾಕ್ಷರ (ಎಫ್-ಕೀಲಿ) ಒತ್ತಿದರೆ ‘ಕ್’ ಮೂಡುತ್ತದೆ. ತಕ್ಷಣ ಮತ್ತೆ ‘ಕ’ ಒತ್ತಿದರೆ ‘ಕ್ಕ’ ಮೂಡುತ್ತದೆ. ಅರ್ಧಾಕ್ಷರದ ನಂತರ, ಕ ಬದಲಿಗೆ ಲ ಒತ್ತಿದರೆ ‘ಕ್ಲ’ ಆಗುತ್ತದೆ. ಎಲ್ಲಾ ಸಂಯುಕ್ತಾಕ್ಷರಗಳಿಗೂ ಇದೇ ಕ್ರಮವನ್ನು ಅನುಸರಿಸಬೇಕು.

 ಕನ್ನಡದ ಉಚ್ಚಾರಣಾ ಕ್ರಮದಲ್ಲಿಯೇ ನಿಮ್ಮ ಟೈಪಿಂಗ್ ಕ್ರಮವೂ ಸಹ ಇರುವುದನ್ನು ಗಮನಿಸಿ. ಎಲ್ಲರೀತಿಯ ಒತ್ತಕ್ಷರಗಳನ್ನು ಬೆರಳಚ್ಚಿಸಿದ ನಂತರವೇ ಕೊನೆಯಲ್ಲಿ ಸ್ವರದ ಕೀಲಿಯನ್ನು ಬೆರಳಚ್ಚಿಸಬೇಕು ಎಂಬ ಕ್ರಮ ಗಮನದಲ್ಲಿರಲಿ. ಒಂದಕ್ಕಿಂತ ಹೆಚ್ಚಿನ ಒತ್ತಕ್ಷರವನ್ನು ಮೂಡಿಸಬೇಕಾದರೆ ಲಿಂಕ್ ಕೀಲಿಯನ್ನು (ಎಫ್-ಕೀಲಿ) ಒತ್ತುವ ಅದೇ ತರ್ಕವನ್ನು ಪುನರಾವರ್ತಿಸಬೇಕು. ಉದಾಹರಣೆಗೆ : ಸ, ್, ತ, ್, ರ, ಈ(sftfrI) ಎಂಬ ಆರು ಕೀಲಿಗಳನ್ನು ಕ್ರಮವಾಗಿ ಒತ್ತಿದರೆ, ಉಚ್ಚಾರಣೆಯ ಕ್ರಮದಲ್ಲಿ ಒತ್ತಿದ ಕೀಲಿಸರಣಿಯನ್ನು ಆಧರಿಸಿ ಕೀಲಿಮಣೆ ಡ್ರೈವರ್ ಇದರ ಅರ್ಥ ವಿಶ್ಲೇಷಣೆ ಮಾಡಿ, ‘ಸ್ತ್ರೀ’ ಎಂಬ ಪೂರ್ಣಾಕ್ಷರವನ್ನು ಸಂಯೋಜಿಸಿ ಮೂಡಿಸುತ್ತದೆ. ಈ ಸ್ತ್ರೀ ಎಂಬ ಪೂರ್ಣಾಕ್ಷರದಲ್ಲಿ ಅನುಕ್ರಮವಾಗಿ ಸಿ, ್ತ, ್ರ,ೀ ಎಂಬ ನಾಲ್ಕು ಅಕ್ಷರ ಭಾಗಗಳು (ಗ್ಲಿಫ್) ಇವೆ. ಏನಾದರೂ ತಪ್ಪಾದರೆ, ಎಲ್ಲವನ್ನೂ ಅಳಿಸಿ ಮತ್ತೊಮ್ಮೆ ಟೈಪ್ ಮಾಡಬೇಕು. ಸೀ ಎಂದು ಟೈಪ್ ಮಾಡಿ ತ ಮತ್ತು ರ ಒತ್ತಕ್ಷರಗಳನ್ನು ಹುಡುಕಿ ಟೈಪ್ ಮಾಡುತ್ತೇನೆ ಎಂದರೆ ಅದು ಸಾಧ್ಯವಿಲ್ಲ. ಕೀಲಿಯೊತ್ತುಗಳ ಕ್ರಮವನ್ನು ಮೀರುವಂತಿಲ್ಲ (ಕೀ-ಇನ್ ಸೀಕ್ವೆನ್ಸ್).

ಜಾಲತಾಣದಲ್ಲಿನ ‘ತಂತ್ರಾಂಶಗಳು’ ಎಂಬ ವಿಭಾಗದಲ್ಲಿ ಲಭ್ಯವಿರುವ ‘ಕೀಲಿಮಣೆ ಬೋಧಕ’ ಎಂಬ ಕೀಬೋರ್ಡ್ ಟ್ಯೂಟರ್‌ನ್ನು ಡೌನ್‌ಲೋಡ್ ಮಾಡಿ ನಿಮ್ಮ ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿಕೊಂಡು, ಕನ್ನಡದ ವೇಗದ ಟೈಪಿಂಗ್ ಅಭ್ಯಾಸವನ್ನು ಸುಲಭವಾಗಿ ಕೈಗೊಳ್ಳಬಹುದು.

Writer - ಸತ್ಯನಾರಾಯಣ ಎ.

contributor

Editor - ಸತ್ಯನಾರಾಯಣ ಎ.

contributor

Similar News