×
Ad

ಹಿರಿಯರು ಕೊಟ್ಟ ಸಂಪತ್ತು ಕಣ್ಮರೆ: ಪ್ರೊ.ಬಿ.ಕೆ.ಚಂದ್ರಶೇಖರ್

Update: 2017-09-03 20:20 IST

ಬೆಂಗಳೂರು, ಸೆ.3: ಹಿರಿಯರು ನಮಗೆ ಕೊಟ್ಟ ಕೆರೆಗಳು, ಉದ್ಯಾನವನ ಸೇರಿದಂತೆ ಸಾರ್ವಜನಿಕ ಸಂಪತ್ತನ್ನು ಒಂದೊಂದಾಗಿ ಕಳೆದುಕೊಳ್ಳುತ್ತಿದ್ದೇವೆ ಎಂದು ಪ್ರೊ.ಬಿ.ಕೆ.ಚಂದ್ರಶೇಖರ್ ವಿಷಾದಿಸಿದ್ದಾರೆ.

ರವಿವಾರ ನಾಡೋಜ ಡಾ.ಜಿ.ನಾರಾಯಣ ಪ್ರತಿಷ್ಠಾನ ಮತ್ತು ಭಾರತೀಯ ಕನ್ನಡ ಪ್ರತಿಷ್ಠಾನ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಡಾ.ಜಿ.ನಾರಾಯಣರವರ 95ನೆ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇವಲ 30-40ವರ್ಷಗಳ ಹಿಂದೆ ಬೆಂಗಳೂರು ನಗರದಲ್ಲಿ ನೂರಾರು ಕೆರೆಗಳು ಇದ್ದವು. ಇಲ್ಲಿ ವಾಸಿಸುತ್ತಿದ್ದ ಜನ ಕೃಷಿಯನ್ನು ಆಧರಿಸಿ ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿದ್ದರು. ಆದರೆ, ಜನಪ್ರತಿನಿಧಿಗಳ ಸ್ವಾರ್ಥ ಹಿತಾಸಕ್ತಿಗಳಿಗೆ ಕೆರೆಗಳು ಹಾಗೂ ಉದ್ಯಾನವನಗಳು ಒಂದೊಂದಾಗಿ ನಾಶವಾಗುತ್ತಾ ಬಂದಿವೆ. ಈಗ ಉಳಿದಿರುವ ಬೆಳಂದೂರು ಕೆರೆ ಸೇರಿದಂತೆ ಬೆರಳೆಣಿಕೆ ಕೆರೆಗಳ ನೀರು ವಿಷಯುಕ್ತವಾಗಿವೆ ಎಂದು ಅವರು ತಿಳಿಸಿದರು.

ಮಾರ್ಗದರ್ಶಕ ಕೊರತೆ: ಸರ್ವಜನಿಕ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರಲ್ಲಿ ನಮ್ಮ ಹಿರಿಯರ ಕೊಡುಗೆ ಅಪಾರ. ತಮ್ಮ ಇಡೀ ಬದುಕನ್ನು ಸಾರ್ವಜನಿಕ ಏಳಿಗೆಗಾಗಿಯೇ ಮೀಸಲಿಟ್ಟರು. ಆದರೆ, ಅಂತವರ ಮಾರ್ಗದರ್ಶನವನ್ನು ಪಡೆಯಬೇಕಾದ ನಮ್ಮ ಜನಪ್ರತಿನಿಧಿಗಳು ಹಣ ಹಾಗೂ ಭ್ರಷ್ಟಾಚಾರದ ಹಿಂದೆ ಹೋಗುತ್ತಿದ್ದಾರೆ ಎಂದು ಅವರು ವಿಷಾದಿಸಿದರು.

ಕನ್ನಡ ಮಾಧ್ಯಮದಲ್ಲಿ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುವಂತಹ ಸೌಲಭ್ಯಗಳು ಇಂದಿಗೂ ಇಲ್ಲವಾಗಿದೆ. ಕನ್ನಡ ಮಾಧ್ಯಮವನ್ನು ಕೇವಲ ಪ್ರಾಥಮಿಕ ಶಾಲಾ ಹಂತಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ತಲೆಮಾರು ಕನ್ನಡ ಭಾಷೆಯ ಬಗ್ಗೆ ಹೇಗೆ ಆತ್ಮವಿಶ್ವಾಸವನ್ನು ರೂಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಈಬಗ್ಗೆ ಎಲ್ಲರು ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಈ ವೇಳೆ ಆಕಾಶವಾಣಿಯ ನಿರ್ವಾಹಕಿ ನಾಗಮಣಿರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೈಗಾರಿಕಾ ವಾಣಿಜ್ಯ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಭಾರತೀಯ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News