ವರದಕ್ಷಿಣಿ ಕಿರುಕುಳ ಪ್ರಕರಣ: ಕನ್ನಡ ಕಲಿಯಲು ಮಹಿಳೆಗೆ ಹೈಕೋರ್ಟ್ ಸಲಹೆ
ಬೆಂಗಳೂರು, ಆ.3: ತಮಿಳುನಾಡು, ಕೇರಳಕ್ಕೆ ಹೋದವರು ಅಲ್ಲಿನ ಭಾಷೆ ಕಲಿಯುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿರುವ ಅನ್ಯ ಭಾಷಿಕರು ಮಾತ್ರ ಕನ್ನಡ ಕಲಿಯಲು ಉತ್ಸಾಹ ತೋರುವುದಿಲ್ಲ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ವರದಕ್ಷಿಣಿ ಕಿರುಕುಳ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಅರವಿಂದ ಕುಮಾರ್ ಅರ್ಜಿದಾರ ಮಹಿಳೆಯನ್ನು, ಏನಮ್ಮಾ ನಿನ್ನ ಪತಿಯ ವಿರುದ್ಧ ದಾಖಲಿಸಿರುವ ದೂರು ಹಿಂದಕ್ಕೆ ಪಡೆಯುತ್ತೀಯಾ ಎಂದು ಕನ್ನಡದಲ್ಲಿ ಕೇಳಿದರು. ಅದಕ್ಕೆ ಮಹಿಳೆ ಯಾವುದೇ ಉತ್ತರ ನೀಡದೆ ಮೌನವಾಗಿದ್ದರು. ಆಗ ನ್ಯಾಯಮೂರ್ತಿಗಳು ಹಿಂದಿಯಲ್ಲಿ ಪ್ರಶ್ನಿಸಿದರು. ಆಗಲೂ ಆಕೆ ಮೌನವಾಗಿದ್ದರು. ಪುನಃ ನ್ಯಾಯಮೂರ್ತಿಗಳು, ಅಲ್ಲಮ್ಮಾ ನಿನಗೆ ಬರುವ ಭಾಷೆಯಾದರೂ ಯಾವುದು ಎಂದರು.
ತಡಬಡಾಯಿಸುತ್ತಲೇ ನ್ಯಾಯಮೂರ್ತಿಗಳ ಪ್ರಶ್ನೆಯನ್ನು ಸ್ವಲ್ಪ ಅರ್ಥ ಮಾಡಿಕೊಂಡ ಮಹಿಳೆ, ಉರ್ದು ಮಾತ್ರವೇ ಗೊತ್ತು ಎಂದರು. ಆಗ ನ್ಯಾಯಮೂರ್ತಿಗಳು, ಯಾರಾದರೂ ಉರ್ದು ಗೊತ್ತಿರುವವರು ಈಕೆಗೆ ಕೋರ್ಟ್‌ನ ಪ್ರಶ್ನೆ ಏನೆಂಬುದನ್ನು ತಿಳಿಸಿ ಎಂದರು.
ತಕ್ಷಣ ಉರ್ದು ಗೊತ್ತಿದ್ದ ವಕೀಲರೊಬ್ಬರು ಮುಂದೆ ಬಂದು ಮಹಿಳೆಗೆ ನ್ಯಾಯಮೂರ್ತಿಗಳು ಏನು ಹೇಳುತ್ತಿದ್ದಾರೆ ಎಂಬುದನ್ನು ವಿವರಿಸಿದರು. ಆಕೆ ಬೆಂಗಳೂರಿಗೆ ಬಂದು ಎಷ್ಟು ವರ್ಷ ಆಯಿತಂತೆ ಕೇಳಿ ಎಂದೂ ನ್ಯಾಯಮೂರ್ತಿಗಳು ವಕೀಲರಿಗೆ ಸೂಚಿಸಿದರು.
ಮಹಿಳೆ, ನಾನು ಇಲ್ಲೇ ಹುಟ್ಟಿ ಬೆಳೆದಿದ್ದೇನೆ. 30 ವರ್ಷ ಆಯಿತು ಎಂದರು. ಇದಕ್ಕೆ ನ್ಯಾಯಮೂರ್ತಿಗಳು ಹುಬ್ಬೇರಿಸಿ, ಇನ್ನಾದರೂ ಕನ್ನಡ ಕಲಿಯಮ್ಮಾ ಎಂದು ಸಲಹೆ ನೀಡಿ ಪ್ರಕರಣ ವಿಲೇವಾರಿ ಮಾಡಿದರು.