×
Ad

ಪೂರ್ವ ಘಟ್ಟಗಳ ಸಂರಕ್ಷಣೆಗಾಗಿ ಆಗ್ರಹಿಸಿ ರ್ಯಾಲಿ

Update: 2017-09-03 21:12 IST

ಬೆಂಗಳೂರು, ಸೆ.3: ಕರ್ನಾಟಕ ಸೇರಿದಂತೆ ಐದು ರಾಜ್ಯಗಳಲ್ಲಿರುವ ಪೂರ್ವ ಘಟ್ಟಗಳ ಸಂರಕ್ಷಣೆಗಾಗಿ ಒತ್ತಾಯಿಸಿ ಹೈದರಾಬಾದ್ ಮೂಲಕ ಎನ್‌ಜಿಒ ಗ್ರೀನ್ ಅಲೆಯನ್ಸ್ ಫಾರ್ ಕನ್ಸರ್‌ವೇಷನ್ ಆಫ್ ಈಸ್ಟರ್ನ್ ಘಾಟ್ಸ್ (ಜಿಆರ್‌ಎಸಿಇ) ಆರಂಭಿಸಿರುವ ರ್ಯಾಲಿ ರವಿವಾರ ಬೆಂಗಳೂರಿಗೆ ಆಗಮಿಸಿತು.

ಸೆ. 2ರಿಂದ ಆರಂಭಿಸಿರುವ ರ್ಯಾಲಿ ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು ಹಾಗೂ ಒಡಿಸ್ಸಾ ರಾಜ್ಯಗಳ ಪೂರ್ವ ಘಟ್ಟ ಪ್ರದೇಶಗಳಲ್ಲಿ ಸುಮಾರು 2100 ಕಿ.ಮೀ.ಗಳಷ್ಟು ಸಂಚರಿಸಲಿದೆ. ಸೆ.9ರಂದು ಹೈದರಾಬಾದ್‌ನಲ್ಲಿ ಅಂತ್ಯಗೊಳ್ಳಲಿದೆ.

ಅನಂತರ ರ್ಯಾಲಿ ವೇಳೆ ದಾಖಲಿಸಿದ ಮಾಹಿತಿ ಆಧರಿಸಿ ವರದಿ ತಯಾರಿಸಿ ಡಿಸೆಂಬರ್‌ನಲ್ಲಿ ದಿಲ್ಲಿಯಲ್ಲಿ ಏರ್ಪಡಿಸುವ ಸಂವಾದಕ್ಕೆ ಐದು ರಾಜ್ಯಗಳ ಪೂರ್ವ ಘಟ್ಟ ಪ್ರದೇಶಗಳಿಗೆ ಸೇರಿದ 55 ಸಂಸದರನ್ನು ಆಹ್ವಾನಿಸಿ, ವರದಿ ಒಪ್ಪಿಸಿ ಪೂರ್ವ ಘಟ್ಟಗಳ ಸಂರಕ್ಷಣೆಗೆ ಆಗ್ರಹಿಸುವುದು ಎಂದು ರ್ಯಾಲಿಯ ಸಂಘಟಕ ಜಿಆರ್‌ಎಸಿಇ ಸಂಸ್ಥೆಯ ಅಧ್ಯಕ್ಷ ದಿಲೀಪ್ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪೂರ್ವ ಘಟ್ಟ ಪ್ರದೇಶಗಳಲ್ಲಿ ಪರಿಸರ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಅಲ್ಲದೆ, ಅಲ್ಲಿನ ಮೂಲ ನಿವಾಸಿಗಳಾದ ಬುಡಕಟ್ಟು ಸಮುದಾಯಗಳನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಹುನ್ನಾರುಗಳು ನಡೆಯುತ್ತಿವೆ. ಪರಿಸರದ ಮೇಲೆ ನಡೆಯುತ್ತಿರುವ ದಾಳಿಗಳನ್ನು ವಿರೋಧಿಸಿ ಹಾಗೂ ಘಟ್ಟ ಪ್ರದೇಶದ ವಾಸ್ತವ ಸ್ಥಿತಿ ಅಧ್ಯಯನಕ್ಕೆ ಈ ರ್ಯಾಲಿ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ತುಳಸಿರಾವ್ ಮಾತನಾಡಿ, ಕರ್ನಾಟಕದಲ್ಲಿ ಪೂರ್ವ ಘಟ್ಟಗಳಲ್ಲಿರುವ ಬುಡಕಟ್ಟು ಸಮುದಾಯಗಳನ್ನು ಸ್ಥಳಾಂತರಿಸಲು ಸರಕಾರ ಚಿಂತಿಸಿರುವುದು ಸರಿಯಲ್ಲ. ಸ್ಥಳೀಯವಾಗಿ ಹುಟ್ಟಿ, ಬೆಳೆದಿರುವ ಬುಡಕಟ್ಟು ಜನರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಪರಿಸರ ಸಂರಕ್ಷಣೆಯಲ್ಲಿ ಅಲ್ಲಿನ ಮೂಲ ನಿವಾಸಿಗಳ ಪಾತ್ರ ಮಹತ್ವದ್ದಾಗಿದೆ. ಪರಿಸರದೊಂದಿಗೆ ಗಾಢ ಬಾಂಧವ್ಯ ಹೊಂದಿರುವ ಅವರನ್ನು ಸ್ಥಳಾಂತರ ಮಾಡಿದರೆ ಪರಿಸರ ಅಸಮತೋಲನ ಉಂಟಾಗಲಿದೆ. ಹೀಗಾಗಿ ಸರಕಾರ ಒಕ್ಕಲೆಬ್ಬಿಸುವುದನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.

ಹೈದರಾಬಾದ್‌ನಿಂದ ಆರಂಭವಾಗಿರುವ ರ್ಯಾಲಿಯಲ್ಲಿ ಸುಮಾರು 10 ಜನರು ಭಾಗವಹಿಸಿದ್ದಾರೆ. ಈ ರ್ಯಾಲಿ ಅನಂತಪುರ, ಬೆಂಗಳೂರು, ಮೈಸೂರು, ಚಾಮರಾಜನಗರ, ಊಟಿ, ಕೊಯಮತ್ತೂರು, ಈರೋಡ್, ಸೇಲಂ, ವೆಲ್ಲೂರು, ಚಿತ್ತೂರು, ಕಡಪ, ಕರ್ನೂಲ್‌ನಲ್ಲಿ ಸಂಚರಿಸಿ ಹೈದರಾಬಾದ್‌ನಲ್ಲಿ ಅಂತ್ಯಗೊಳ್ಳಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News