ಚಿಂತನೆಗಳನ್ನು ಕಸಿಯುವ ಕಾಲ ದೂರವಿಲ್ಲ: ಡಾ.ಎ.ಎಸ್.ಕಿರಣ್ ಕುಮಾರ್
ಬೆಂಗಳೂರು, ಸೆ. 3: ವ್ಯಕ್ತಿಯೊಬ್ಬನ ಮೆದುಳಿನಲ್ಲಿರುವ ಚಿಂತನೆ-ಯೋಜನೆಗಳನ್ನು ಅವನ ಅರಿವಿಗೆ ಬರದ ಹಾಗೆ ಕಸಿಯುವಂತಹ ಕಾಲ ದೂರವಿಲ್ಲ. ಈ ಕುರಿತು ಜಗತ್ತಿನ ಹಲವು ಭಾಗಗಳಲ್ಲಿ ಸಂಶೋಧನೆಗಳು ನಡೆಯುತ್ತಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ.ಎ.ಎಸ್.ಕಿರಣ್‌ಕುಮಾರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ರವಿವಾರ ನವಕರ್ನಾಟಕ ಪುಸ್ತಕ ಪ್ರಕಾಶನ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಹಿರಿಯ ಸಾಹಿತಿ ಡಾ.ಟಿ.ಆರ್.ಅನಂತರಾಮು ಸಂಪಾದಕತ್ವದ 'ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು' ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಿಜ್ಞಾನ ಕ್ಷೇತ್ರದ ಬೆಳವಣಿಗೆಯ ಗತಿಯನ್ನು ನೋಡಿದರೆ ಮುಂದಿನ ಹತ್ತು ವರ್ಷದಲ್ಲಿ ನಮ್ಮ ನಡುವೆ ಯಾವೆಲ್ಲ ಹೊಸ ಅವಿಷ್ಕಾರಗಳು ಉದಯಿಸುತ್ತವೆ ಎಂಬುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಈ ಹಿನ್ನೆಲ್ಲೆಯಲ್ಲಿ ನೋಡುವುದಾದರೆ ವ್ಯಕ್ತಿಯೊಬ್ಬನ ಮೆದುಳನ್ನು ಆತನಿಗೆ ಗೊತ್ತಾಗದ ರೀತಿಯಲ್ಲಿ ಇಣಿಕಿ ನೋಡುವಂತಹ ತಂತ್ರಜ್ಞಾನ ಮುಂದಿನ ಕೆಲವೇ ವರ್ಷಗಳಲ್ಲಿ ಅವಿಷ್ಕಾರಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಹೇಳಿದರು.
ಹುಟ್ಟಿದ ಮಗುವಿನ ಡಿಎನ್‌ಎ ಪರೀಕ್ಷಿಸಿ ಆ ಮಗು ಭವಿಷ್ಯದಲ್ಲಿ ಏನೆಲ್ಲ ಮಾಡಬಲ್ಲನು ಎಂಬುದನ್ನು ಊಹಿಸುವಂತಹ ಸಂಶೋಧನೆಗಳು ನಡೆಯುತ್ತಿವೆ. ಸಂಶೋಧನೆ ಎನ್ನುವುದು ಪೂರ್ವ ನಿರ್ಧರಿತವಲ್ಲ. ನಾವು ಚಿಂತಿಸುತ್ತಾ, ಪ್ರಯೋಗ ಮಾಡುತ್ತಾ ಹೋದಂತೆ ನಮಗೆ ಅಚ್ಚರಿಯಾಗುವಂತಹ ಫಲಿತಾಂಶಗಳು ಹೊರ ಬೀಳಲಿವೆ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.
ನಮ್ಮ ಸುತ್ತಮುತ್ತಲಿನ ಸಮಾಜದ ಕುರಿತು ಅತೀವ ಕುತೂಹಲ ಹೊಂದಿರುವ ಪ್ರತಿಯೊಬ್ಬರು ವಿಜ್ಞಾನಿಯಾಗಬಹುದು. ವಿಜ್ಞಾನ ವಿಷಯಗಳನ್ನು ಓದಿದವನು ಮಾತ್ರ ವಿಜ್ಞಾನಿಯಲ್ಲ. ಆಯಾ ಕ್ಷೇತ್ರದಲ್ಲಿ ಮಹತ್ತರವಾದುದನ್ನು ಸಾಧಿಸಿದವನು ವಿಜ್ಞಾನಿಯೇ ಆಗಿರುತ್ತಾನೆ. ಹೀಗಾಗಿ ಮಗುವಿನಲ್ಲಿರುವ ವೈಚಾರಿಕೆ ಮನಸ್ಥಿತಿಯನ್ನು ಹಾಳು ಮಾಡದೆ ಜೋಪಾನವಾಗಿ ಕಾದರೆ ಆ ಮಗು ಭವಿಷ್ಯದಲ್ಲಿ ವಿಜ್ಞಾನಿಯಾಗಿ ರೂಪಗೊಳ್ಳುತ್ತಾನೆ ಎಂದು ಅವರು ತಿಳಿಸಿದರು.
ಕತೆಗಾರ ವಸುಧೇಂದ್ರ ಮಾತನಾಡಿ, ವಿಜ್ಞಾನಕ್ಕೆ ಸಂಬಂಧಿಸಿದ ಬಹುತೇಕ ಸಂಶೋಧನೆಗಳು ಯುದ್ಧಕ್ಕೆ ಸಂಬಂಧಿಸಿದ್ದಾಗಿರುವುದು ಬೇಸರದ ಸಂಗತಿಯಾಗಿದೆ. ಯಾರು ಕೂಡ ವಿಜ್ಞಾನದ ಹುಂಬುತನದಿಂದಾಗಿ ಮಾನವೀಯತೆಯನ್ನು ಮರೆಯಬಾರದು. ಈ ಭೂಮಿಯ ಮೇಲೆ ಮಾನವೀಯತೆಗಿಂತ ಅಮೂಲ್ಯವಾದ ವಿಷಯ ಮತ್ತೊಂದಿಲ್ಲವೆಂದು ಹೇಳಿದರು.
ವಿಜ್ಞಾನ ಎನ್ನುವುದು ಕಲೆಯೇ ಆಗಿದೆ. ಬದುಕಿನ ಕುರಿತು ಆಸಕ್ತಿ, ಕುತೂಹಲವನ್ನು ಇಟ್ಟುಕೊಂಡರೆ ಪ್ರತಿಯೊಬ್ಬರು ತಮ್ಮದೇ ಕ್ಷೇತ್ರದಲ್ಲಿ ಮಹತ್ತರವಾದುದನ್ನು ಸಾಧಿಸಬಹುದಾಗಿದೆ. ಈ ನಿಟ್ಟಿನಲ್ಲಿ ಬುದ್ಧನ ಧ್ಯಾನಕ್ಕೆ ಸಿಕ್ಕ ಸಿದ್ಧಿಯಂತೆ ವಿಜ್ಞಾನಿಗಳು ತಮ್ಮ ಸಂಶೋಧನೆಯ ಮೂಲಕ ಸಿದ್ಧಿಯನ್ನು ಪಡೆಯುತ್ತಾರೆ ಎಂದರು.
ಈ ವೇಳೆ 'ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು' ಕೃತಿಯಲ್ಲಿ ಲೇಖನಗಳನ್ನು ಬರೆದ ಲೇಖಕರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೃತಿಯ ಸಂಪಾದಕ ಡಾ.ಟಿ.ಆರ್.ಅನಂತರಾಮು, ಲೇಖಕ ಡಾ.ನಾ.ಸೋಮೇಶ್ವರ ಮತ್ತಿತರರಿದ್ದರು.
'ಆಧುನಿಕ ಹಾಗೂ ಜಾಗತಿಕ ಯುಗದಲ್ಲಿ ಕುಟುಂಬವೊಂದಕ್ಕೆ ಒಂದು ಮಾತೃಭಾಷೆ ಎನ್ನುವುದು ಇರುತ್ತದೆಯೇ ಎಂಬುದು ಯಕ್ಷ ಪ್ರಶ್ನೆ. ಪ್ರಸ್ತುತ ದಿನದಲ್ಲಿ ಅನ್ಯಭಾಷೆಯ, ಪ್ರದೇಶದ ಹುಡುಗ-ಹುಡುಗಿಯರು ನಡುವೆ ಮದುವೆ ಆಗುವವರ ಸಂಖ್ಯೆ ಹೆಚ್ಚುತ್ತಿದೆ. ಹಾಗೂ ಮಕ್ಕಳು ವಿದ್ಯಾವಂತರಾಗಿ ಅನ್ಯ ದೇಶಗಳಿಗೆ ಪಲಾಯನ ವಾಗುವ ಸಂದರ್ಭಗಳಲ್ಲಿ ಮಾತೃಭಾಷೆಗಳನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಿನ ಸಂಗತಿ.'
-ಡಾ.ಎ.ಎಸ್.ಕಿರಣ್‌ಕುಮಾರ್ , ಅಧ್ಯಕ್ಷ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ