×
Ad

ಮೌನ ಅನುಸಂದಾನವೇ ಅತ್ಯುತ್ತಮ ಕವಿತೆ: ಎಚ್‌.ಎಸ್.ವಿ

Update: 2017-09-03 22:49 IST

ಬೆಂಗಳೂರು, ಸೆ.3: ಓದುಗನಲ್ಲಿ ಮೌನವಾಗಿ ಅನುಸಂಧಾನ ಮಾಡುವುದೇ ಅತ್ಯುತ್ತಮ ಕವಿತೆ ಎಂದು ಕವಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಅಭಿಪ್ರಾಯಪಟ್ಟರು.

ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕವಯತ್ರಿ ಬಿ.ಎಸ್.ಮಧುವತಿ ಅವರ ‘ನೆನಹು ತುಂಬಿ’ ಕವನ ಸಂಕಲ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕಾವ್ಯ ಸಂದೇಶ ನೀಡುವುದಿಲ್ಲ. ಕವಿತೆ ಓದುಗನಗ ಆಂತರ್ಯದಲ್ಲಿ ಉಂಟುಮಾಡುವ ‘ಮೌನ ಅನುಸಂಧಾನ’ವೇ ಕಾವ್ಯದ ಸಂದೇಶ. ಈ ರೀತಿಯ ಕವಿತೆಗಳು ಎಂದಿಗೂ ಅತ್ಯುತ್ತಮ ಎನಿಸಿಕೊಳ್ಳುತ್ತವೆ ಎಂದು ಹೇಳಿದರು.

ನೆನಹು ತುಂಬಿ ಕವನ ಸಂಕಲದ ಲೇಖಕಿ ಬಿ.ಎಸ್.ಮಧುಮತಿ ಸೂಕ್ಷ್ಮ ಮನಸು ಮತ್ತು ಸಂವೇದನೆ ಉಳ್ಳವರು. ಅದು ಅವರ ಕವಿತೆಗಳಲ್ಲೂ ಹಾಸುಹೊಕ್ಕಾಗಿದೆ. ನಾನು ಅವರನ್ನು ತಾರುಣ್ಯದ ದಿನಗಳಿಂದಲೂ ಬಲ್ಲೆ. ಅವರ ಕೆಲ ಕವಿತೆಗಳು ನಮ್ಮ ಓದನ್ನ ಆಕ್ರಮಿಸುವ ಕಸುವು ಹೊಂದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಹಜ ಸೌಂದರ್ಯದಿಂದ ಕೂಡಿರುವ ಅವುಗಳಲ್ಲಿ ವಿಷಾದ ಆಲಾಪವೂ ಇದೆ. ಅವರು ಸಾಹಿತ್ಯ ಪ್ರವೇಶಿಸಿ ಮೂವತ್ತು ವರ್ಷಗಳ ಬಳಿಕ ಮೊದಲ ಕವನ ಸಂಕಲ ಪ್ರಕಟಿಸಿದ್ದಾರೆ. ಇನ್ನು ಮುಂದೆಯೂ ವೌಲ್ಯಯುತ ಕವಿತೆಗಳು ಮೂಡಿ ಬರಲಿ. ಕವಿಗೆ ವಯಸ್ಸಾದರೂ ಕವಿತೆಗಳಿಗೆ ವಯಸ್ಸಾಗುವುದಿಲ್ಲ. ಹಾಗಾಗಿ ಮಧುಮತಿ ಅವರು ತಮ್ಮ ಸಾಹಿತ್ಯ ಸೃಷ್ಟಿಯ ಕೈಂಕರ್ಯ ಮುಂದುವರಿಸಲಿ ಎಂದು ಶುಭಹಾರೈಸಿದರು.

ಕೆಲ ಕವಿಗಳು ಬೇರೆಯವರ ಮಾತುಗಳನ್ನೇ ಕಾವ್ಯವಾಗಿಸಿ ಅದು ತಮ್ಮದೇ ಎಂದು ಭಾವಿಸುತ್ತಾರೆ. ಇದು ತಪ್ಪು. ಕವಿತೆ ಬರೆಯುವ ಮುನ್ನ ಇಂತಹ ಅಂಶಗಳನ್ನು ಮನಗಾಣಬೇಕು. ತಮ್ಮದೇ ಮಾತುಗಳಲ್ಲಿ ಕಾವ್ಯ ಕಟ್ಟಿಕೊಡುವ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಲೇಖಕಿ ಬಿ.ಎಸ್.ಮಧುಮತಿ ಅವರ ಕವನಗಳು ಸ್ವತಂತ್ರ ರಚನೆಯಾಗಿವೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್ ಮಾತನಾಡಿ, ಬಿ.ಎಸ್.ಮಧುವತಿ ಅವರ ಕವನಗಳಲ್ಲಿ ಮಹಿಳೆಯ ತವಕ-ತಲ್ಲಣಗಳು ಅನಾವರಣಗೊಂಡಿವೆ. ಹಿಂದಿನ ಮತ್ತು ಇಂದಿನ ಪರಿಸ್ಥಿತಿಯಲ್ಲಿ ಮಹಿಳೆ ಹೇಗೆ ಬಂಧಿಯಾಗಿದ್ದಾಳೆ ಎಂಬುದರ ವಾಸ್ತವ ಚಿತ್ರಣ ಕಟ್ಟಿಕೊಟ್ಟಿದ್ದಾರೆ ಎಂದರು. ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ, ರಮಾಕುಮಾರಿ ಸಿದ್ಧಲಿಂಗಯ್ಯ, ಲೇಖಕಿ ಬಿ.ಎಸ್.ಮಧುಮತಿ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News