ಬಿಜೆಪಿಯವರಿಗೆ ಬಡವರ ಹಸಿವಿನ ಬಗ್ಗೆ ಅರಿವಿಲ್ಲ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಸೆ.5: ಬಿಜೆಪಿಯವರು ಹೊಟ್ಟೆ ತುಂಬಿದವರು. ಅವರಿಗೆ ಬಡವರ ಹಸಿವಿನ ಬಗ್ಗೆ ಅರಿವಿಲ್ಲ. ಹಾಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ಗಳ ಯಶಸ್ಸನ್ನು ಸಹಿಸಲಾರದೆ ಅನಗತ್ಯ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದ ಬಿಇಎಲ್ ರಸ್ತೆ ಮತ್ತು ಗಂಗಾನಗರದ ಇಂದಿರಾ ಕ್ಯಾಂಟೀನ್‌ಗಳಿಗೆ ಶಾಸಕರೊಂದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಮ್ಮ ಸರಕಾರದ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ಇಂದಿರಾ ಕ್ಯಾಂಟಿನ್ ಬಗ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ಬಂದಿದ್ದು, ಅದನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ನಮ್ಮ ಸರಕಾರ ಹೆಜ್ಜೆ ಇಟ್ಟಿದೆ. ಎಲ್ಲ 198 ವಾರ್ಡುಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಂಡರೆ ಪ್ರತಿದಿನ ಸುಮಾರು 3 ಲಕ್ಷ ಜನರ ಹಸಿವು ನೀಗಿಸಿದಂತಾಗುತ್ತದೆ ಎಂದು ಹೇಳಿದರು.
ಇದು ಹುಡುಗಾಟಿಕೆಯ ವಿಷಯವಲ್ಲ. ಇಂತಹ ಯಶಸ್ವಿ ಯೋಜನೆಯನ್ನು ಬಿಜೆಪಿ ಸಹಿಸಿಕೊಳ್ಳಲು ಆಗದೇ ವಿನಾಕಾರಣ ಆರೋಪಗಳನ್ನು ಮಾಡುತ್ತಿದೆ. ಇದನ್ನು ಜನತೆ ಸಹಿಸುವುದಿಲ್ಲ. ಇವರ ಕುತಂತ್ರಗಳ ಬಗ್ಗೆ ಮುಂದಿನ ದಿನಗಳಲ್ಲಿ ಜನತೆಯೆ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.
ಸ್ಥಳೀಯ ಜನರೊಂದಿಗೆ ಉಪಾಹಾರ ಸೇವಿಸಿ ಕ್ಯಾಂಟೀನ್‌ನ ಅಗತ್ಯತೆ ಅದರ ಸದುಪಯೋಗದ ಬಗ್ಗೆ ವಿಚಾರ ವಿನಿಮಯ ನಡೆಸಿದ ಪರಮೇಶ್ವರ್, ಪ್ರಾರಂಭಿಕ ಹಂತದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದು, ಅವುಗಳನ್ನು ಸರಕಾರ ಪರಿಹರಿಸುತ್ತದೆ. ರಾಜ್ಯ ಸರಕಾರದ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆ ಯೋಜನೆ ಇದಾಗಿದೆ ಎಂದರು.
ಅನ್ನಭಾಗ್ಯದ ಜೊತೆಗೆ ಇಂದಿರಾ ಕ್ಯಾಂಟೀನ್ ಕಡುಬಡವರಿಗೆ ಅತ್ಯುತ್ತಮವಾದ ಯೋಜನೆಯಾಗಿದೆ. ಕಡಿಮೆ ಹಣಕ್ಕೆ ಬಡ ವರ್ಗದವರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟವನ್ನು ಮಾಡಿ, ಶ್ರಮಿಕ ವರ್ಗ ಅನುಕೂಲವನ್ನು ಪಡೆಯುತ್ತಿದ್ದಾರೆ. ಈ ಯೋಜನೆಯಿಂದ ನಮ್ಮ ಸರಕಾರಕ್ಕೆ ಉತ್ತೇಜನ ಸಿಕ್ಕಿದೆ. ಈ ಯೋಜನೆಯನ್ನು ರಾಜ್ಯಾದ್ಯಂತ ಆರಂಭಿಸಲು ಈಗಾಗಲೇ ನಾನು ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೇನೆ ಎಂದು ತಿಳಿಸಿದರು.
ಗಂಗಾನಗರದ ಸಿಬಿಐ ಕಚೇರಿ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ಯಾಂಟೀನ್ ನಿರ್ವಾಹಕರು ಮಧ್ಯಾಹ್ನ ಹಾಗೂ ರಾತ್ರಿ ಊಟದ ಸಮಸ್ಯೆಯಿಲ್ಲ. ಬೆಳಗಿನ ತಿಂಡಿ ಪ್ರಮಾಣ ಮಾತ್ರ ಕಡಿಮೆ ಬರುತ್ತಿದೆ ಎಂದು ಪರಮೇಶ್ವರ್ ಗಮನಕ್ಕೆ ತಂದರು. ತಕ್ಷಣ ಬಿಬಿಎಂಪಿ ಆಯುಕ್ತರಿಗೆ ಕರೆ ಮಾಡಿ, ಕ್ಯಾಂಟೀನ್‌ಗೆ ನೀಡಲಾಗುವ ತಿಂಡಿಯ ಪ್ರಮಾಣವನ್ನು ಹೆಚ್ಚಿಸುವಂತೆ ಹಾಗೂ ಮತ್ತಷ್ಟು ರುಚಿಯಾಗಿ ನೀಡುವಂತೆ ಪರಮೇಶ್ವರ್ ಕೋರಿದರು.
ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಸರಕಾರ ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಹತ್ತು ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ನಾವು ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ ಎಂದು ಪರಮೇಶ್ವರ್ ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಸ್.ಟಿ.ಸೋಮಶೇಖರ್, ಎಂ.ಮುನಿರತ್ನ ಹಾಗೂ ವಿಧಾನಪರಿಷತ್ ಸದಸ್ಯ ಭೈರತಿ ಸುರೇಶ್ ಉಪಸ್ಥಿತರಿದ್ದರು.
ಬಿಜೆಪಿಯವರು ಹಮ್ಮಿಕೊಂಡಿರುವ ಮಂಗಳೂರು ಚಲೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆಗೆ ನಮ್ಮ ತಕರಾರು ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದೆ. ಆದರೆ, ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಬೈಕ್ ರ್ಯಾಲಿ, ಮಂಗಳೂರು ಚಲೋ ಹಮ್ಮಿಕೊಳ್ಳುವ ಮೂಲಕ ಕೋಮುಗಲಭೆ, ಶಾಂತಿಭಂಗ ತರುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡುವ ನಿಟ್ಟಿನಲ್ಲಿ ಬಿಜೆಪಿ ಪ್ರಯತ್ನ ಮಾಡುತ್ತಿದೆ. ಇದನ್ನು ಸರಕಾರ ಸಹಿಸುವುದಿಲ್ಲ.
-ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ