ನಾರಾಯಣ ಮೂರ್ತಿಗೆ ಜಾಗತಿಕ ನಾಯಕತ್ವ ಪ್ರಶಸ್ತಿ
ಬೆಂಗಳೂರು, ಸೆ. 5: ಇನ್ಫೋಸಿಸ್ ಸಹ ಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಮತ್ತು ಮುಂಬೈ ಮೂಲಕ ವಿಜ್ಞಾನಿ ವೀಣಾ ಸಹಜ್‌ವಾಲಾ ಅವರಿಗೆ ನವೀನ ಸಂಶೋಧನೆ, ಶೈಕ್ಷಣಿಕ ಸಾಧನೆ ಮತ್ತು ಜಾಗತಿಕ ನಾಯಕತ್ವಕ್ಕಾಗಿ ಪ್ರತಿಷ್ಠಿತ ಪ್ಲಸ್ ಅಲೈಯನ್ಸ್ ಬಹುಮಾನ ಪಡೆದಿದ್ದಾರೆ.
ನಾರಾಯಣಮೂರ್ತಿಗೆ ಜಾಗತಿಕ ನಾಯಕತ್ವಕ್ಕಾಗಿ ಹಾಗೂ ಪ್ರೊ.ಸಹಜ್‌ವಾಲಾಗೆ ನವೀನ ಸಂಶೋಧನೆ ‘ದ ನ್ಯೂ ಸೈನ್ಸ್ ಆಫ್ ಗ್ರೀನ್ ಮ್ಯಾನುಫ್ಯಾಕ್ಚರಿಂಗ್’ ಯೋಜನೆಗೆ ಬಹುಮಾನ ನೀಡಿದ್ದು, ಬಹುಮಾನದ ಮೊತ್ತ 50 ಸಾವಿರ ಡಾಲರ್ ಆಗಿದೆ.
ಲಂಡನ್‌ನಲ್ಲಿ ನಡೆದ ದ ವರ್ಲ್ಡ್ ಅಕಾಡಮಿಕ್ ಸಮ್ಮಿಟ್ ಕಾರ್ಯಕ್ರಮದಲ್ಲಿ ಎನ್‌ಎಚ್‌ಎಸ್ ಇಂಗ್ಲೆಂಡ್ ಅಧ್ಯಕ್ಷ ಹಾಗೂ ಪ್ಲಸ್ ಅಲೈಯನ್ಸ್ ಅಡ್ವೈಸರಿ ಬೋರ್ಡ್‌ನ ಅಧ್ಯಕ್ಷ ಪ್ರೊ.ಸರ್ ಮ್ಯಾಲ್ಕಂ ಗ್ರಾಂಟ್ ಪ್ರಶಸ್ತಿ ಪ್ರದಾನ ಮಾಡಿದರು.
ಪ್ಲಸ್ ಅಲೈಯನ್ಸ್ ಎಂಬುದು ಅರಿಜೋನಾ ಸ್ಟೇಟ್ ಯೂನಿವರ್ಸಿಟಿ, ಕಿಂಗ್ಸ್ ಕಾಲೇಜು ಲಂಡನ್ ಮತ್ತು ಯುಎನ್‌ಎಸ್‌ಡಬ್ಲೂ ಸಿಡ್ನಿಯಲ್ಲಿ ವಿಶೇಷ ಜಂಟಿ ಸಹಭಾಗಿತ್ವವಾಗಿದೆ. ಇದು ಸಂಶೋಧನಾ ಆಧಾರಿತ ಜಾಗತಿಕ ಸವಾಲುಗಳಿಗೆ ಸ್ಪಂದಿಸಲು ವಿಶ್ವದರ್ಜೆಯ ಕಲಿಕೆಗೆ ಉತ್ತೇಜನ ನೀಡಲಿದೆ ಎಂದು ಪ್ರಕಟನೆ ತಿಳಿಸಿದೆ.