×
Ad

ಮಂಗಳೂರು ಚಲೋ ಬೈಕ್ ರ್ಯಾಲಿ: ದ.ಕ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧಿಸಲು ಕೋರಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ

Update: 2017-09-05 20:55 IST

ಬೆಂಗಳೂರು, ಆ.5: ರಾಜ್ಯ ಬಿಜೆಪಿ ಯುವ ಮೋರ್ಚಾದ ವತಿಯಿಂದ ಆಯೋಜಿಸಿರುವ ಮಂಗಳೂರು ಚಲೋ ಬೈಕ್ ರ್ಯಾಲಿಯನ್ನು ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧಿಸಲು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಈ ಸಂಬಂಧ ಮಂಗಳೂರಿನ ಸುಹೈಲ್ ಖಾನ್ ಹಾಗೂ ಇತರ ಐವರು ಪಿಐಎಲ್ ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರ ಪೀಠದಲ್ಲಿ ಬುಧವಾರ ವಿಚಾರಣೆಗೆ ಬರಲಿದೆ.

ಕಳೆದ ಮೂರು ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೆಂದೂ ಕಂಡರಿಯದ ಕೋಮುಗಲಭೆಗಳು ಸಂಭವಿಸಿವೆ. ಎರಡು ಪ್ರಮುಖ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರ ಹತ್ಯೆ ನಡೆದಿವೆ. ಇದರಿಂದ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು, ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ಇದೀಗ ಮತ್ತೆ ರ್ಯಾಲಿಯ ನೆಪದಲ್ಲಿ ಸಾವಿರಾರು ಜನ ಸೇರಿದರೆ ಮತ್ತಷ್ಟು ಅಹಿತಕರ ಘಟನೆಗಳು ಸಂಭವಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಈ ಹಂತದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿರುವ ಬೈಕ್ ರ್ಯಾಲಿ ಇದೇ ತಿಂಗಳ 7ರಂದು ದಕ್ಷಿಣ ಕನ್ನಡ ಜಿಲ್ಲೆ ತಲುಪಲಿದೆ. ಇದರಿಂದ ಮತ್ತೆ ಕೋಮು ಗಲಭೆ ಸಂಭವಿಸಿ ಜಿಲ್ಲೆಯಲ್ಲಿ ಶಾಂತಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ರ್ಯಾಲಿಯ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ನಿರ್ದೇಶಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News