×
Ad

ವರ್ತಕರು ರಿಟರ್ನ್ಸ್ ಸಲ್ಲಿಸುವಂತೆ ಗಮನಹರಿಸಿ: ಸಿಎಂ ಸಿದ್ದರಾಮಯ್ಯ

Update: 2017-09-05 21:12 IST

ಬೆಂಗಳೂರು, ಸೆ.5: ಜಿಎಸ್‌ಟಿ ಜಾರಿಗೆ ಬಂದ ಬಳಿಕ ಹೆಸರು ನೋಂದಾಯಿಸಿರುವ ಎಲ್ಲ ವರ್ತಕರು ರಿಟರ್ನ್ಸ್ ಸಲ್ಲಿಸುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತೆರಿಗೆ ಸಂಗ್ರಹ ಮಾಡುವ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಜಿಎಸ್‌ಟಿ ಜಾರಿಯಾದ ನಂತರದ ಬೆಳವಣಿಗೆಗಳ ಬಗ್ಗೆ ಅಧಿಕಾರಿಗಳಿಂದ ಅವರು ಮಾಹಿತಿ ಪಡೆದರು.

ವಾಣಿಜ್ಯ ತೆರಿಗೆ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ, ಮುಂದಿನ ತಿಂಗಳು ಮತ್ತೆ ಪರಿಶೀಲನೆ ನಡೆಸುತ್ತೇನೆ. ಆ ವೇಳೆಗೆ ವರ್ತಕರ ರಿಟರ್ನ್ಸ್‌ನಲ್ಲಿ ಪ್ರಗತಿ ಕಂಡು ಬಂದಿರಬೇಕು ಎಂದು ಅವರು ಸೂಚಿಸಿದರು.

ನೀವೆಲ್ಲ ಹಿರಿಯ ಅಧಿಕಾರಿಗಳು. ವರ್ತಕರು ರಿಟರ್ನ್ಸ್ ಸಲ್ಲಿಸುವಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಮುಂದಿನ ಸಭೆಯಲ್ಲಿ ಕಾರಣಗಳನ್ನು ಹೇಳಿದರೆ ಕೇಳುವುದಿಲ್ಲ ಎಂದು ಮುಖ್ಯಮಂತ್ರಿ ತಾಕೀತು ಮಾಡಿದರು.

ನೂರು ಕೋಟಿ ಮೀರಿ ವಹಿವಾಟು ನಡೆಸುತ್ತಿರುವ ವರ್ತಕರು ಗ್ರಾಹಕರಿಂದ ತೆರಿಗೆ ವಸೂಲಿ ಮಾಡಿದ್ದಾರೆ. ಆದರೆ ರಿಟರ್ನ್ಸ್ ಸಲ್ಲಿಸಿಲ್ಲ. ಇದು ಸರಿಯಾದ ಕ್ರಮವಲ್ಲ. ವರ್ತಕರಿಂದ ಬರುವ ಅಪೀಲುಗಳನ್ನು ಎರಡು ವರ್ಷ ಮೀರದಂತೆ ಉಳಿಸಿಕೊಳ್ಳಬಾರದು. ಆಗಾಗ ವಿಚಾರಣೆ ನಡೆಸಿ ವಿಲೇವಾರಿ ಮಾಡಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದರು.

ಅಬಕಾರಿ ಇಲಾಖೆ: ಆದಾಯ ಕುಸಿತಕ್ಕೆ ಹೆದ್ದಾರಿ ಬಾರ್‌ಗಳು ಬಂದ್ ಆಗಿತ್ತು ಎಂದು ನೆಪ ಹೇಳಬಾರದು. ಕೆಲ ಜಿಲ್ಲೆಗಳಲ್ಲಿ ಬಂದ್ ಆಗಿದ್ದರೂ ಆದಾಯ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ನೆಪ ಹೇಳಿದರೆ ಕೇಳುವುದಿಲ್ಲ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿಸಿ ಮುಟ್ಟಿಸಿದರು.

ಬಾರ್ ಪರವಾನಿಗೆ ನವೀಕರಣ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ವಿಳಂಬ ಧೋರಣೆ ಅನುಸರಿಸಬಾರದು. ಸುಪ್ರೀಂ ಕೋರ್ಟ್ ಆದೇಶ ಅನುಸಾರ ಸೆ.15ರೊಳಗೆ ಎಲ್ಲ ಬಾರ್‌ಗಳ ಪರವಾನಿಗೆ ನವೀಕರಣ ಆಗಬೇಕು ಎಂದು ಅವರು ಹೇಳಿದರು.

ಸಾರಿಗೆ ಇಲಾಖೆ: ಇಲಾಖೆಗೆ 6006 ಕೋಟಿ ರೂ. ಗುರಿ ನೀಡಲಾಗಿದೆ. ಆ ಪೈಕಿ 2360 ಕೋಟಿ ರೂ.ಈ ವರೆಗೆ ಸಂಗ್ರಹವಾಗಿದೆ ಎಂದು ಇಲಾಖೆ ಆಯುಕ್ತ ದಯಾನಂದ ಮುಖ್ಯಮಂತ್ರಿಗೆ ಮಾಹಿತಿ ನೀಡಿದರು.

ನೋಂದಣಿ, ಮುದ್ರಾಂಕ ಇಲಾಖೆ: ಬರಗಾಲ ಮತ್ತು ನೋಟು ಅಮಾನ್ಯದ ಹಿನ್ನೆಲೆಯಲ್ಲಿ ಬೆಂಗಳೂರು ಹೊರತಪಡಿಸಿ ಬೇರೆ ಜಿಲ್ಲೆಗಳಲ್ಲಿ ಈವರೆಗೆ ಆದಾಯ ಕಡಿಮೆಯಾಗಿದೆ ಎಂದು ಅಧಿಕಾರಿಗಳು ವಿವರಿಸಿದರು. ಡಿಸೆಂಬರ್ ಬಳಿಕ ನಿಗದಿತ ಗುರಿ ತಲುಪುವ ವಿಶ್ವಾಸವಿದೆ. ವಾಡಿಕೆ ಪ್ರಕಾರ ಕೊನೆಯ ಐದು ತಿಂಗಳಲ್ಲಿ ನಿರೀಕ್ಷಿತ ಆದಾಯ ಬರಲಿದೆ ಎಂದು ಅವರು ಹೇಳಿದರು.

ಗಣಿ, ಭೂ ವಿಜ್ಞಾನ ಇಲಾಖೆ: ಆದಾಯ ಸಂಗ್ರಹದಲ್ಲಿ 2667 ಕೋಟಿ ರೂ.ಗಳ ಗುರಿ ನೀಡಲಾಗಿದೆ. ಈ ವರೆಗೆ ಶೇ.90ರಷ್ಟು ಗುರಿ ಸಾಧನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಎಲ್.ಕೆ.ಅತೀಕ್, ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಸಭೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News