ಸ್ಥಳೀಯ ನೇಮಕಾತಿ ನಿಯಮ ಪುನಃ ಜಾರಿಗೆ ಒತ್ತಾಯ: ಪ್ರೊ.ಎಸ್.ಜಿ.ಸಿದ್ದರಾಮಯ್ಯ
ಬೆಂಗಳೂರು, ಸೆ.5: ಪ್ರಸ್ತುತ ಈಗಿರುವ ಕೇಂದ್ರ ಸರಕಾರದ ಐಬಿಪಿಎಸ್ ನೇಮಕಾತಿ ನಿಯಮಾವಳಿಗಳನ್ನು ಬದಲಿಸಿ, ಈ ಹಿಂದೆ ಇದ್ದ ಆರ್‌ಆರ್‌ಬಿ ಸ್ಥಳೀಯ ನೇಮಕಾತಿ ನಿಯಮಗಳನ್ನೆ ಜಾರಿಗೊಳಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ತಿಳಿಸಿದ್ದಾರೆ.
ಬ್ಯಾಂಕ್‌ಗಳಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಹಾಗೂ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ಒದಗಿಸುವ ಕುರಿತು ಮಂಗಳವಾರ ವಿಕಾಸಸೌಧದಲ್ಲಿ ರಾಜ್ಯದ ಎಲ್ಲ ಲೀಡ್ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ಹೇರಲು ಸೆ.6ರಂದು ಹೊಸದಿಲ್ಲಿಗೆ 12 ಜನರನ್ನೊಳಗೊಂಡ ನಿಯೋಗವನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಐಬಿಪಿಎಸ್ ನಿಯಮಾವಳಿಗಳಿಂದ ರಾಜ್ಯದಲ್ಲಿ ಬಹುತೇಕ ಕನ್ನಡೇತರರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೇಮಕಗೊಂಡಿದ್ದು ಇದರಿಂದ ಕನ್ನಡಿಗರ ಸ್ಥಿತಿ ಆತಂಕವಾಗಿರುವುದಲ್ಲದೆ, ಸ್ಥಳೀಯರು ಬ್ಯಾಂಕ್‌ಗಳಲ್ಲಿ ಕನ್ನಡದಲ್ಲಿ ವ್ಯವಹರಿಸಲು ಸಾಧ್ಯವಾಗದಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸರೋಜಿನಿ ಮಹಿಷಿ ವರದಿಯನ್ವಯ ಗ್ರೂಪ್ ‘ಸಿ’ ಮತ್ತು ‘ಡಿ’ ವೃಂದದ ನೌಕರಿಯಲ್ಲಿ ಶೇ.100ರಷ್ಟು ಸ್ಥಳೀಯರಿಗೆ ಮೀಸಲಾತಿ ಮತ್ತು ‘ಎ’ ವೃಂದದಲ್ಲಿ ಶೇ.65 ಹಾಗು ‘ಬಿ’ ವೃಂದದ ಅಧಿಕಾರಿಗಳಿಗೆ ಶೇ.85ರಷ್ಟು ಸ್ಥಳೀಯ ಮೀಸಲಾತಿ ನಿಗದಿಪಡಿಸಲು ಒತ್ತಾಯಿಸಲಾಗುವುದು ಎಂದು ಹೇಳಿದರು.
ಮುಂದಿನ ಬ್ಯಾಂಕಿಂಗ್ ಪರೀಕ್ಷೆಗಳು ನಡೆಯಲಿದ್ದು, ಪ್ರಸ್ತುತ ಈಗ ಇರುವ ನೇಮಕಾತಿ ನಿಯಮದಲ್ಲಿ ಕನ್ನಡೇತರರು ನೇಮಕಗೊಂಡಲ್ಲಿ ಇನ್ನು ಮೂವತ್ತು ವರ್ಷಗಳು ಕನ್ನಡಿಗರಿಗೆ ಕನ್ನಡದ ನೆಲದ ಬ್ಯಾಂಕ್‌ಗಳಲ್ಲಿಯೆ ಅವಕಾಶವಿಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ವಲಸೆಯನ್ನು ಗೌರವ ನೀಡುತ್ತಲೇ, ವಲಸೆ ಅನುಪಾತವನ್ನು ಮೀರಿ ಅಸಮತೋಲನ ರೀತಿಯಲ್ಲಿ ವಲಸೆಯ ಪ್ರಭಾವವೆ ಹೆಚ್ಚಾದಾಗ ಅವರನ್ನು ಇಲ್ಲಿಂದ ಕಳುಹಿಸುವ ಅನಿವಾರ್ಯ ಸ್ಥಿತಿ ನಿರ್ಮಾಣ ಮಾಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಸಿದ್ದರಾಮಯ್ಯ ನೀಡಿದರು.
ಎಲ್ಲ ಲೀಡ್‌ಬ್ಯಾಂಕ್‌ನ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗದವರು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಸಂಪೂರ್ಣವಾಗಿ ಕನ್ನಡದಲ್ಲಿಯೆ ವ್ಯವಹರಿಸುವಂತೆ ಮತ್ತು ನೇಮಕಾತಿ ನಿಯಮಗಳನ್ನು ಬದಲಿಸಲು ಕೇಂದ್ರ ಸರಕಾರಕ್ಕೆ ಪತ್ರ ಚಳವಳಿಯನ್ನು ನಡೆಸಿ ಒತ್ತಾಯ ತರುವಂತೆ ಅವರು ಮನವಿ ಮಾಡಿದರು.
ಸಭೆಯಲ್ಲಿ ರಾಜ್ಯದ ಲೀಡ್‌ಬ್ಯಾಂಕ್ ಆದ ಸಿಂಡಿಕೇಟ್ ಬ್ಯಾಂಕ್ ಮುಖ್ಯಸ್ಥ ಮಂಜುನಾಥ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳೀಧರ, ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ಜೆ.ನರಸಿಂಹಮೂರ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಪ್ರಭಾಕರ್ ಪಟೇಲ್ ಹಾಗು ಗಿರೀಶ್ ಪಟೇಲ್ ಉಪಸ್ಥಿತರಿದ್ದರು.