×
Ad

ಸೆ.12ರಂದು ಆಯೋಜಿಸಿರುವ ಸಾಮರಸ್ಯೆ ನಡಿಗೆಗೂ ಅನುಮತಿ ಇಲ್ಲ: ಸಚಿವ ರಾಮಲಿಂಗಾರೆಡ್ಡಿ

Update: 2017-09-05 21:33 IST

ಬೆಂಗಳೂರು, ಸೆ.5: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮಂಗಳೂರಿನಲ್ಲಿ ಸೆ.12ರಂದು ಆಯೋಜಿಸಿರುವ ಸಾಮರಸ್ಯ ನಡಿಗೆಗೂ ಅನುಮತಿ ನೀಡುವುದಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಈಗ ತಾನೆ ಶಾಂತಿ ನೆಲೆಸಿದೆ. ಹೀಗಾಗಿ, ಯಾವುದೆ ರೀತಿಯ ರ್ಯಾಲಿ, ಯಾತ್ರೆಗಳ ಅಗತ್ಯವಿಲ್ಲ. ಸಾಮರಸ್ಯ ನಡಿಗೆಯನ್ನು ಕೈ ಬಿಡುವಂತೆ ರಮಾನಾಥ ರೈಗೆ ಸಲಹೆ ಮಾಡುತ್ತೇನೆ ಎಂದರು.

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳು ಒಂದಾಗಿ ಮಂಗಳೂರಿನಲ್ಲಿ ಶಾಂತಿ ಯಾತ್ರೆ ನಡೆಸಿದರೆ ಮಾತ್ರ ಅನುಮತಿ ನೀಡಲಾಗುವುದು. ಪ್ರತ್ಯೇಕವಾಗಿ ಯಾರಿಗೂ ರ್ಯಾಲಿಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ಕುರಿತು ಸಿಬಿಐ ನಡೆಸುವ ತನಿಖೆಗೆ ರಾಜ್ಯ ಸರಕಾರ ಸಂಪೂರ್ಣ ಸಹಕಾರ ನೀಡಲಿದೆ. ಈ ಹಿಂದೆ ಐಎಎಸ್ ಅಧಿಕಾರಿ ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣದಲ್ಲಿಯೂ ನಾವು ಸಹಕಾರ ನೀಡಿದ್ದೇವೆ ಎಂದು ಅವರು ತಿಳಿಸಿದರು.

ಡಿ.ಕೆ.ರವಿ ಪ್ರಕರಣದಲ್ಲಿಯೂ ಸಚಿವ ಕೆ.ಜೆ.ಜಾರ್ಜ್‌ಗೆ ಸಿಬಿಐ ಕ್ಲೀನ್‌ಚಿಟ್ ನೀಡಿತ್ತು. ಗಣಪತಿ ಪ್ರಕರಣದಲ್ಲಿಯೂ ಕೆ.ಜೆ.ಜಾರ್ಜ್ ಹಾಗೂ ಐಪಿಎಸ್ ಅಧಿಕಾರಿಗಳಿಗೆ ಕ್ಲೀನ್‌ಚಿಟ್ ಸಿಗುವ ವಿಶ್ವಾಸವಿದೆ. ಸುಪ್ರೀಂಕೋರ್ಟ್ ಆದೇಶದಂತೆ ಸಿಬಿಐ ತನಿಖೆ ಮಾಡಲಿ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆಗ್ರಹಿಸಿರುವ ಕುರಿತು ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಅನೇಕ ಕೇಂದ್ರ ಸಚಿವರ ವಿರುದ್ಧ ವಿವಿಧ ತನಿಖೆಗಳು ನಡೆಯುತ್ತಿವೆ. ಅವರೆಲ್ಲರೂ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆಯೇ. ಹುಡ್ಕೋ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಅನಂತ್‌ಕುಮಾರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಯೇ ಎಂದು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News