×
Ad

ಬಡವರ ನೆಮ್ಮದಿ ಕಸಿಯುತ್ತಿರುವ ಜಿಎಸ್‌ಟಿ: ಎಚ್.ಎಸ್.ದೊರೆಸ್ವಾಮಿ

Update: 2017-09-07 21:13 IST

ಬೆಂಗಳೂರು, ಸೆ.7: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರವು ಜಿಎಸ್‌ಟಿ ಜಾರಿಗೊಳಿಸುವ ಮೂಲಕ ಬಡವರ ನೆಮ್ಮದಿಯನ್ನು ಕಸಿದುಕೊಂಡಿದೆ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದ ಪುರಭವನದ ಎದುರು ಕಲಾವಿದರು, ರಂಗಕರ್ಮಿಗಳು, ಸಾಮಾಜಿಕ ಹೋರಾಟಗಾರರು ಹಾಗೂ ಗ್ರಾಹಕರು ಕೈ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಿರುವ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ಆಯೋಜಿಸಿದ್ದ ಕರನಿರಾಕರಣೆ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೈ ಉತ್ಪನ್ನಗಳನ್ನು ತಯಾರಿಸುವವರಿಗೆ ಬ್ರಿಟಿಷರ ಕಾಲದಿಂದಲೂ ಪ್ರೋತ್ಸಾಹ ನೀಡಲಾಗುತ್ತಿದೆ. ಅಲ್ಲದೆ, ದೇಶಕ್ಕೆ ಸ್ವಾತಂತ್ರ ಬಂದ ನಂತರ ಅಧಿಕಾರಕ್ಕೆ ಬಂದ ಎಲ್ಲ ಸರಕಾರಗಳು ಕೈ ಮಗ್ಗಗಳು ಹಾಗೂ ಕರಕುಶಲ ಕರ್ಮಿಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿವೆ ಎಂದು ಅವರು ಹೇಳಿದರು.

ನರೇಂದ್ರಮೋದಿಗೆ ದೇಶದ ವ್ಯವಸ್ಥೆಯ ಪರಿಚಯವಿಲ್ಲ. ಆದುದರಿಂದಲೆ ಕೈ ಮಗ್ಗ, ಖಾದಿ, ಮಡಿಕೆ, ಕುಡಿಕೆ ಮೇಲೆ ತೆರಿಗೆ ವಿಧಿಸಿದ್ದಾರೆ. ಅತ್ಯಂತ ಕಡು ಬಡತನದಿಂದ ಜೀವನ ನಡೆಸುವವರ ಮೇಲೆ ತೆರಿಗೆ ವಿಧಿಸುವುದು ಸರಿಯಾದ ಕ್ರಮವಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಮಡಿಕೆ ಮಾಡುವವರು, ಚಪ್ಪಲಿ ಮಾಡುವವರು ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಸರಕಾರ ಮಾಡಬೇಕು. ಅದನ್ನು ಬಿಟ್ಟು, ತೆರಿಗೆ ವಿಧಿಸುವ ಮೂಲಕ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವುದು ಆಡಳಿತ ನಡೆಸುವವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.

ದೇಶದ ಯುವ ಪೀಳಿಗೆ ಬ್ರಾಂಡೆಡ್ ಬಟ್ಟೆಗಳ ಖರೀದಿಗೆ ಮುಗಿ ಬೀಳುತ್ತಿದೆ. ಇದರಿಂದ, ವಿದೇಶಿ ಕಂಪೆನಿಗಳಿಗೆ ಲಾಭವಾಗುತ್ತದೆಯೆ ಹೊರತು, ದೇಶಕ್ಕಲ್ಲ. ನಾವು ಧರಿಸಿರುವ ಖಾದಿ ಬಟ್ಟೆಯ ಹಿಂದಿರುವ ಜನರ ದುಡಿಮೆ, ಶ್ರಮವನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ವಿಧಾನಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ ಮಾತನಾಡಿ, ದೇಶದಲ್ಲಿ ಜಿಎಸ್‌ಟಿಯನ್ನು ಯಾವ ಉತ್ಪನ್ನಗಳ ಮೇಲೆ ಯಾವ ರೀತಿಯಲ್ಲಿ ವಿಧಿಸಲಾಗುತ್ತಿದೆ ಎಂಬುದು ಜನಸಾಮಾನ್ಯರಿಗೆ ಇನ್ನೂ ಅರ್ಥವಾಗಿಲ್ಲ. ಅತ್ಯಂತ ಕಡು ಬಡತನದಲ್ಲಿ ಜೀವನ ನಡೆಸುವವರ ಮೇಲೆ ತೆರಿಗೆ ವಿಧಿಸುತ್ತಿರುವುದು ನೋವಿನ ಸಂಗತಿ ಎಂದರು.

ರಂಗಕರ್ಮಿ ಎಂ.ಎಸ್.ಸತ್ಯು ಮಾತನಾಡಿ, ನನ್ನ ಉದ್ಯಮ ಕಲೆ. ನಾಟಕ ಮಾಡಿ ನನ್ನ ಜೀವನವನ್ನು ಸಾಗಿಸುತ್ತಿದ್ದೇನೆ. ಆದರೆ, ನಾಟಕ ಮಾಡಿ ಹೊರಗೆ ಬಂದ ನಂತರ ತೆರಿಗೆ ಕಟ್ಟಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಬದುಕುವಂತಾಗಿರುವುದು ಆಶ್ಚರ್ಯಕರ ಎಂದರು.

ಸತ್ಯಾಗ್ರಹದಲ್ಲಿ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ, ಗಾಯಕಿ ಎಂ.ಡಿ.ಪಲ್ಲವಿ, ಡಾ.ವಿಜಯಮ್ಮ, ಹೋರಾಟಗಾರ ನಾಗರಾಜಮೂರ್ತಿ, ಕಲಾವಿದ ಕಿಶೋರ್, ಪ್ರಸನ್ನ, ಶಶಿಧರ ಅಡಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜಿಎಸ್‌ಟಿಗೆ ಸೂಜಿ:
ಕೈ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಿರುವ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ನಡೆದ ಕರ ನಿರಾಕರಣೆ ಸತ್ಯಾಗ್ರಹದಲ್ಲಿ ಗಾಳಿ ತುಂಬಿಸಿದ್ದ ಜಿಎಸ್‌ಟಿ ಭೂತಕ್ಕೆ ಸೂಜಿ ಚುಚ್ಚುವ ಮೂಲಕ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News