×
Ad

ಸಂಗೀತಕ್ಕೆ ಅಪರಾಧಗಳನ್ನು ತಡೆಯುವ ಶಕ್ತಿಯಿದೆ: ಎಸ್.ದಿವಾಕರ್

Update: 2017-09-07 21:16 IST

ಬೆಂಗಳೂರು, ಸೆ. 7: ದೇಶದ ಪ್ರತಿಯೊಂದು ಮನೆಯಲ್ಲಿ ಸಂಗೀತ ಕಲಿತಿದ್ದರೆ ಕೊಲೆ, ಸುಲಿಗೆ, ಅತ್ಯಾಚಾರದಂತಹ ಅಪರಾಧ ಪ್ರಕರಣಗಳು ನಡೆಯುತ್ತಿರಲಿಲ್ಲ ಎಂದು ಸಾಹಿತಿ ಎಸ್.ದಿವಾಕರ್ ಇಂದಿಲ್ಲಿ ಅಭಿಪ್ರಾಯಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ಕಸಾಪದಲ್ಲಿ ಹಮ್ಮಿಕೊಂಡಿದ್ದ ಹಿಂದೂಸ್ತಾನಿ ಗಾಯಕ ಡಾ.ಎಂ.ವೆಂಕಟೇಶ್‌ಕುಮಾರ್ ಅವರಿಗೆ ಕೆ.ಮೋಹನ್‌ದೇವ್ ಆಳ್ವ ಹಾಗೂ ಡಾ.ಎಂ.ಕೆ.ಶೈಲಜಾ ಆಳ್ವಾ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬರೂ ಶಾಸೀಯ ಸಂಗೀತ ಕಲಿತಿದ್ದಿದ್ದರೆ ಇಂಡೋ-ಪಾಕ್ ಬೇರೆಯಾಗುತ್ತಿರಲಿಲ್ಲ. ಈ ಎರಡೂ ದೇಶಗಳ ನಡುವೆ ಯುದ್ಧವೂ ನಡೆಯುತ್ತಿರಲಿಲ್ಲ. ಅಪರಾಧ ಸಂಖ್ಯೆಗಳೂ ನಿಯಂತ್ರಣಕ್ಕೆ ಬರುತ್ತಿದ್ದವು ಎಂದರು.

ಸಂಗೀತ ಎಂಬುದು ಮಾತಿಗೆ, ವಿವರಣೆಗೆ ನಿಲುಕದ್ದು. ಅದು ಹೃದಯದ ಮಾತು, ಅಲ್ಲಿಂದಲೇ ಸರಾಗವಾಗಿ ಹೊರಬರುತ್ತದೆ. ಅದನ್ನು ಬಾಯಿಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ. ಹೆಚ್ಚುತ್ತಿರುವ ಅಪರಾಧ, ಅನೈತಿಕ ಚಟುವಟಿಕೆ ನಿಯಂತ್ರಣ ಸೇರಿದಂತೆ ಸಮಾಜವನ್ನು ಸ್ವಾಸ್ಥ್ಯವಾಗಿಡಲು ಸಂಗೀತ ಅತಿಮುಖ್ಯ. ಆಧುನಿಕ ಜಗತ್ತಿನಲ್ಲಿ ಜನರು ಪ್ರತಿನಿತ್ಯ ಜಂಜಾಟದಲ್ಲಿ ತೊಡಗುವುದು, ಅದರ ಒತ್ತಡ ಸಂಗೀತದಿಂದ ನಿವಾರಣೆಯಾಗುತ್ತದೆ. ಹೀಗಾಗಿ, ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಈ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಒಳಿತು ಎಂದು ತಿಳಿಸಿದರು.

ಎಲ್ಲಾ ಕಲೆಗಳ ಆಶಯ, ಆಕೃತಿ ಬೇರೆ ಬೇರೆ ಇದ್ದು, ಸಂಗೀತ ಎಲ್ಲಕ್ಕಿಂತ ಭಿನ್ನವಾದುದು. ಅಂತಹ ಶುದ್ಧ ಕಲೆ ಮತ್ತೊಂದಿಲ್ಲ. ಸಂಗೀತಕ್ಕೆ ಎಲ್ಲವನ್ನೂ ನಿಭಾಯಿಸುವ ಶಕ್ತಿಯಿದೆ. ಹೀಗಾಗಿ, ಪ್ರತಿಯೊಬ್ಬರೂ ಸಂಗೀತದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಯುವಪೀಳಿಗೆ ಅದರಲ್ಲಿ ತಲ್ಲೀನರಾಗುವಂತೆ ಪ್ರೋತ್ಸಾಹಿಸಬೇಕಿದೆ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗಾಯಕ ಡಾ.ಎಂ.ವೆಂಕಟೇಶ್‌ಕುಮಾರ್, ಸಂಗೀತ ಎಲ್ಲರಿಗೂ ತಿಳಿಯುವುದಿಲ್ಲ. 4 ಗಂಟೆ ದೇವರಿಗೆ ಪೂಜೆ ಮಾಡುವುದು, ಸುತ್ತಾಡುವುದು 1 ಗಂಟೆ ಸಂಗೀತ ಕೇಳುವುದಕ್ಕೆ ಸಮವಾದುದು. ಗಂಟೆಗಟ್ಟಲೆ, ವರ್ಷಗಟ್ಟಲೆ ಸಂಗೀತದೊಡನೆ ಸೆಣೆಸಾಡಿ, ಪ್ರೀತಿಸದರೆ ಅದರ ರುಚಿ ಹತ್ತುತ್ತದೆ ಎಂದ ಅವರು, ನಮ್ಮ ರಾಜ್ಯದ ಜನರಿಗೆ ಸಂಗೀತದ ರುಚಿ ಗೊತ್ತಿಲ್ಲ. ಹೊರ ರಾಜ್ಯಗಳಲ್ಲಿ ಹಣ ಕೊಟ್ಟು ಗಂಟೆ ಗಂಟೆಗಳು ಕುಳಿತು ಸಂಗೀತ ಕೇಳುತ್ತಾರೆ. ಆದರೆ, ನಮ್ಮಲ್ಲಿ ಸಂಗೀತ ಕಾರ್ಯಕ್ರಮ ಮುಗಿದರೆ ಸಾಕು ಎಂದು ಹಿಡಿ ಶಾಪ ಹಾಕುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಚಿಂತಕ ಕೆ.ಮೋಹನ್ ದೇವ್ ಆಳ್ವ ಹಾಗೂ ಕಸಾಪ ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News