×
Ad

ಮೂರನೆ ದಿನಕ್ಕೆ ಕಾಲಿಟ್ಟ ವಿಧಾನ ಪರಿಷತ್ ಸದಸ್ಯರ ಧರಣಿ

Update: 2017-09-07 21:58 IST

ಬೆಂಗಳೂರು, ಸೆ.7: ರಾಜ್ಯ ಸರಕಾರ ಶಿಕ್ಷಣ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಬಗೆ ಹರಿಸಬೇಕು ಎಂದು ಒತ್ತಾಯಿಸಿ ವಿಧಾನಪರಿಷತ್ ಸದಸ್ಯರು ವಿಧಾನಸೌಧ ಗಾಂಧಿ ಪ್ರತಿಮೆಯ ಮುಂದೆ ನಡೆಸುತ್ತಿರುವ ಆಹೋರಾತ್ರಿ ಧರಣಿ ಮೂರನೆ ದಿನಕ್ಕೆ ಕಾಲಿಟ್ಟಿದೆ.

ಶಿಕ್ಷಕರ ವೇತನ ತಾರತಮ್ಯ ನಿವಾರಣೆಯಾಗಬೇಕು, ಅಗತ್ಯ ಹುದ್ದೆಗಳಿಗೆ ಶಿಕ್ಷಕರ ನೇಮಕ, ಶಿಕ್ಷಕರ ವರ್ಗಾವಣೆಯಲ್ಲಿ ಪಾರದರ್ಶಕತೆ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಹಲಾವಾರು ಸಮಸ್ಯೆಗಳಿವೆ. ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಟ್ಟ ಕ್ರಮ ಕೈಗೊಳ್ಳುವವರೆಗೆ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯರು ಪಟ್ಟು ಹಿಡಿದಿದ್ದಾರೆ.

ಈ ವೇಳೆ ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ, ಶಿಕ್ಷಕರ ಸಮಸ್ಯೆಗಳನ್ನು ಈಡೇರಿಸಲು ಶಿಕ್ಷಣ ಸಚಿವ ತನ್ವೀರ್ ಸೇಠ್‌ಗೆ ಕಾಳಜಿಯೇ ಇದ್ದಂತಿಲ್ಲ. ಶಿಕ್ಷಕರ ಕುರಿತು ಉಡಾಫೆಯಾಗಿ ಮಾತನಾಡಲು ಪ್ರಾರಂಭಿಸಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಧರಣಿಯನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಧರಣಿ ನಡೆಸುತ್ತಿರುವ ವಿಧಾನಪರಿಷತ್ ಸದಸ್ಯರ ಕುರಿತು ಸಚಿವ ತನ್ವೀರ್ ಸೇಠ್ ತಾತ್ಸಾರವಾಗಿ ಮಾತನಾಡಿದ್ದಾರೆ. ಯಾವುದೇ ಧರಣಿಗೆ ರಾಜ್ಯ ಸರಕಾರ ಕಿವಿಗೊಡುವುದಿಲ್ಲ ಎಂದು ಉದ್ಧಟತನವಾಗಿ ವರ್ತಿಸುತ್ತಿದ್ದಾರೆ. ಇವರ ಮಾತುಗಳಿಂದ ನಮಗೆಲ್ಲ ನೋವಾಗಿದೆ ಎಂದು ಅವರು ವಿಷಾದಿಸಿದರು.

ಶಾಸಕ ಪುಟ್ಟಣ್ಣ ಮಾತನಾಡಿ, ಶಿಕ್ಷಕರ ಪರವಾಗಿ ಧರಣಿ ನಡೆಸುತ್ತಿರುವ ವಿಧಾನಪರಿಷತ್ ಸದಸ್ಯರ ವಿರುದ್ಧ ಸಚಿವ ತನ್ವೀರ್ ಸೇಠ್ ಮನಸಿಗೆ ಬಂದ ಹಾಗೆ ಮಾತನಾಡಿದ್ದಾರೆ. ಇಂತಹ ಸಚಿವರು ನಮ್ಮ ರಾಜ್ಯಕ್ಕೆ ಯೋಗ್ಯರಲ್ಲ. ಈ ಕೂಡಲೆ ಸಚಿವ ತನ್ವೀರ್ ಸೇಠ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News