×
Ad

ಸಕ್ಕರೆ ಕಾರ್ಖಾನೆಗಳ ಸಮಸ್ಯೆ ಕುರಿತು ಸಿಎಂ ನೇತೃತ್ವದಲ್ಲಿ ಸಭೆ

Update: 2017-09-07 22:00 IST

ಬೆಂಗಳೂರು, ಸೆ.7: ಮೈಸೂರು, ಮಂಡ್ಯ ಮತ್ತು ಬೀದರ್ ಜಿಲ್ಲೆಯ ಸಹಕಾರ ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಅಧಿಕಾರಿಗಳು ಹಾಗೂ ಆಯಾ ಭಾಗದ ಶಾಸಕರು, ಸಚಿವೊಂದಿಗೆ ಸುದೀರ್ಘ ಸಭೆ ನಡೆಸಿದರು.

ಮಂಡ್ಯ ಜಿಲ್ಲೆಯ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಎದುರಿಸುತ್ತಿರುವ ಸಮಸ್ಯೆಗಳನ್ನು ಕೂಲಂಕಷವಾಗಿ ಆಲಿಸಿದ ಮುಖ್ಯಮಂತ್ರಿ, ಕಬ್ಬು ನೀಡಿರುವ ರೈತರಿಗೆ ಕೊಡಬೇಕಿರುವ 6.77 ಕೋಟಿ ರೂ. ಹಣವನ್ನು ಕೂಡಲೆ ಬಿಡುಗಡೆ ಮಾಡುವಂತೆ ಹಣಕಾು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜೊತೆಗೆ ಕಬ್ಬು ಅರೆಯುವಿಕೆ ಆರಂಭಿಸಲು 2 ಕೋಟಿ ರೂ.ನೀಡಲು ಒಪ್ಪಿಗೆ ಸೂಚಿಸಿದರು. ಅರೆಯಲು ಸಿದ್ಧವಾಗಿರುವ ಕಬ್ಬು ಪ್ರಮಾಣ ಎಷ್ಟಿದೆ ಎಂಬುದರ ಬಗ್ಗೆ ವರದಿ ನೀಡುವಂತೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು.

ಮೈಸೂರು ಜಿಲ್ಲೆಯ ಕೆ.ಆರ್.ನಗರದ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಆಧಾರದ ಮೇಲೆ ಖಾಸಗಿಯವರಿಗೆ ವಹಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಒಂದು ಹಂತದ ಇತ್ಯರ್ಥವಾಗಿ ಕಾರ್ಮಿಕರಿಗೆ 14 ಕೋಟಿ ರೂ. ನೀಡಲು ಮುಖ್ಯಮಂತ್ರಿ ಆದೇಶಿಸಿದರು.

ಕಾರ್ಖಾನೆಯನ್ನು ಗುತ್ತಿಗೆ ಆಧಾರದ ಮೇಲೆ ಖಾಸಗಿಯವರಿಗೆ ವಹಿಸಲು ಕೂಡಲೆ ಟೆಂಡರ್ ಕರೆಯಲು ಸೂಚಿಸಿದ ಅವರು, ಸಂಕಷ್ಟದಲ್ಲಿರುವ ಕಾರ್ಖಾನೆ ಕಾರ್ಮಿಕರಿಗೆ ರಕ್ಷಣೆ ಒದಗಿಸಬೇಕಿದೆ. ಹೀಗಾಗಿ 154 ಕಾರ್ಮಿಕರಿಗೆ ಒಂದು ಹಂತದ ಇತ್ಯಾರ್ಥವಾಗಿ ಹಣ ನೀಡಬೇಕು ಎಂದರು.

ಗುತ್ತಿಗೆ ಆಧಾರದ ಮೇಲೆ ಕಾರ್ಖಾನೆ ವಹಿಸಿಕೊಳ್ಳಲು ಯಾರೂ ಮುಂದೆ ಬಾರದೆ ಇದ್ದರೆ ಮಾರಾಟ ಮಾಡುವುದಾಗಿ ಸಭೆಯಲ್ಲಿ ಮುಖ್ಯಮಂತ್ರಿ ಹೇಳಿದರು. ಇದಕ್ಕೆ ಶಾಸಕರು ಮತ್ತು ಅಧಿಕಾರಿಗಳು ಒಪ್ಪಿಗೆ ಸೂಚಿಸಿದರು. ಅದೇ ರೀತಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ವಿಚಾರವಾಗಿಯೂ ಸಭೆಯಲ್ಲಿ ಚರ್ಚೆ ನಡೆಯಿತು. ಕಾರ್ಖಾನೆಯ ಪುನಾರಂಭಕ್ಕೆ 20 ಕೋಟಿ ರೂ.ಗಳ ಅಗತ್ಯವಿದೆ ಎಂದು ಶಾಸಕರು ತಿಳಿಸಿದರು.

ಕಾರ್ಖಾನೆ ಪಡೆಯುವ 10 ಕೋಟಿ ರೂ.ಗಳ ಸಾಲಕ್ಕೆ ಸರಕಾರದ ವತಿಯಿಂದ ಖಾತರಿ ನೀಡಲು ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದರು.

ಸಭೆಯಲ್ಲಿ ಸಚಿವರಾದ ಗೀತಾ ಮಹದೇವಪ್ರಸಾದ್, ಈಶ್ವರ ಖಂಡ್ರೆ, ಶಾಸಕರಾದ ರಾಜಶೇಖರ ಪಾಟೀಲ್, ಪುಟ್ಟಣ್ಣಯ್ಯ, ಸಾ.ರಾ.ಮಹೇಶ್, ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News