ನಡಾಲ್ ಸೆಮಿಫೈನಲ್‌ಗೆ, ಫೆಡರರ್ ಹೊರಕ್ಕೆ

Update: 2017-09-07 18:44 GMT

ನ್ಯೂಯಾರ್ಕ್,ಸೆ.7: ವಿಶ್ವದ ನಂ.1 ಟೆನಿಸ್ ಆಟಗಾರ ಸ್ಪೇನ್‌ನ ರಫೆಲ್ ನಡಾಲ್ ಅವರು ಯುಎಸ್ ಓಪನ್ ಪುರುಷರ ಸಿಂಗಲ್ಸ್ ನಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಆದರೆ ಐದು ಬಾರಿ ಚಾಂಪಿಯನ್‌ಶಿಪ್ ಜಯಿಸಿದ್ದ ಸ್ವಿಸ್‌ನ ರೋಜರ್ ಫೆಡರರ್ ಸೋತು ನಿರ್ಗಮಿಸಿದ್ದಾರೆ. ಇದರೊಂದಿಗೆ ಕುತೂಹಲ ಕೆರಳಿಸಿದ್ದ ಸೆಮಿಫೈನಲ್‌ನಲ್ಲಿ ನಡಾಲ್ ಮತ್ತು ಫೆಡರರ್ ಮುಖಾಮುಖಿಯಾಗುವ ಸಾಧ್ಯತೆ ಇನ್ನಿಲ್ಲವಾಗಿದೆ. ನಡಾಲ್ ಅವರು ಕ್ವಾರ್ಟರ್ ಫೈನಲ್‌ನಲ್ಲಿ ರಶ್ಯದ 19ರ ಹರೆಯದ ಆ್ಯಂಡ್ರೆ ರುಬ್ಲೇವ್ ವಿರುದ್ಧ 6-1, 6-2,6-2 ಸೆಟ್‌ಗಳಿಂದ ಜಯ ಗಳಿಸಿ ಆರನೆ ಬಾರಿ ಯುಎಸ್ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದರು. ನಡಾಲ್ ಮತ್ತು ಆ್ಯಂಡ್ರೆ ರುಬ್ಲೇವ್ ಅವರ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯ 75 ನಿಮಿಗಳಲ್ಲಿ ಕೊನೆಗೊಂಡಿತು.

ಡೆಲ್ ಪೆಟ್ರೋ ಸೆಮಿಫೈನಲ್‌ಗೆ: ನಡಾಲ್ ಮತ್ತು ಫೆಡರರ್ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುವುದನ್ನು ತಪ್ಪಿಸಿದವರು ಅರ್ಜೆಂಟೀನಾದ ಜುಯಾನ್ ಮಾರ್ಟಿನ್ ಡೆಲ್ ಪೆಟ್ರೋ.

   ಡೆಲ್ ಪೆಟ್ರೋ ಅವರು ಇಲ್ಲಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ರೋಜರ್ ಫೆಡರರ್ ಅವರನ್ನು 7-5, 3-6, 7-6(10/8), 6-4 ಅಂತರದಿಂದ ಮಣಿಸಿ ಸೆಮಿಫೈನಲ್ ತಲುಪಿದರು. ಅರ್ಜೆಂಟೀನದ ಡೆಲ್ ಪೆಟ್ರೋ ಅವರು 2009ರಲ್ಲಿ ಯುಎಸ್ ಓಪನ್‌ನ ಫೆನಲ್‌ನಲ್ಲಿ ಫೆಡರರ್‌ನ್ನು ಸೋಲಿಸಿ ಚೊಚ್ಚಲ ಗ್ರಾನ್ ಸ್ಲಾಮ್ ಜಯಿಸಿದ್ದರು. ಸೆಮಿಫೈನಲ್‌ನಲ್ಲಿ ನಡಾಲ್‌ರನ್ನು ಮಣಿಸಿ ಪೆಟ್ರೋ ಫೈನಲ್ ತಲುಪಿದ್ದರು. ಶುಕ್ರವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಡೆಲ್ ಪೆಟ್ರೋ ಅವರು ನಡಾಲ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News