ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿದ ಅಮೆರಿಕಾ

Update: 2017-09-08 12:11 GMT

ವಾಷಿಂಗ್ಟನ್, ಸೆ. 8: ಪತ್ರೆಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರ ಕೊಲೆಯನ್ನು ಖಂಡಿಸಿರುವ ಅಮೆರಿಕಾ ಅದನ್ನೊಂದು ‘ದಾರುಣ ಕೊಲೆ’ ಎಂದು ಬಣ್ಣಿಸಿದೆ.

ವಾಕ್ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಹಾಗೂ ತಮ್ಮ ನೇರ ಹಾಗೂ ದಿಟ್ಟ ಮಾತು ಮತ್ತು ಬರಹಗಳಿಗೆ ಹೆಸರುವಾಸಿಯಾಗಿದ್ದ ಗೌರಿ ಲಂಕೇಶ್ ಅವರ ಬಗ್ಗೆ ದಕ್ಷಿಣ ಹಾಗೂ ಮಧ್ಯ ಏಷ್ಯಾ ವ್ಯವಹಾರಗಳಿಗಾಗಿನ ಅಮೆರಿಕಾದ ಹಂಗಾಮಿ ಸೆಕ್ರಟರಿ ಆಪ್ ಸ್ಟೇಟ್ ಅಲಿಸ್ ವೆಲ್ಸ್ ಸಭೆಯೊಂದನ್ನುದ್ದೇಶಿಸಿ ಮಾತನಾಡುವಾಗ ಉಲ್ಲೇಖಿಸುತ್ತಾ ‘‘ಈ ವಾರ ಭಾರತದಲ್ಲಿ ಪ್ರಖರ ರಾಷ್ಟ್ರೀಯವಾದಿಗಳಿಂದ ಟೀಕೆಗೊಳಗಾಗಿದ್ದ ಪತ್ರಕರ್ತೆಯೊಬ್ಬರ ದಾರುಣ ಕೊಲೆಯಾಗಿದೆ’’ ಎಂದು ಹೇಳಿದರು. ‘‘ಇಂತಹ ಪ್ರಕರಣಗಳು ಯಾವುದೇ ಪ್ರಜಾಪ್ರಭುತ್ವ ದೇಶಕ್ಕೆ ಸವಾಲಾಗಿವೆ. ಭಾರತವೂ ಒಂದು ಪ್ರಜಾಪ್ರಭುತ್ವ. ಇಂತಹ ಸವಾಲುಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯವಿರುವ ಭಾರತದ ಸಂಸ್ಥೆಗಳ ಬಗ್ಗೆ ನಮಗೆ ಗೌರವವಿದೆ’’ ಎಂದು ಅವರು ಹೇಳಿದರು.

ಇನ್ನೊಂದು ಬೆಳವಣಿಗೆಯಲ್ಲಿ ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಸಂಸ್ಥೆ ಕೂಡ ಗೌರಿ ಹತ್ಯೆಗೆ ಆಘಾತ ವ್ಯಕ್ತಪಡಿಸಿದೆ. ಕೊಲೆಗಾರರನ್ನು ಪತ್ತೆ ಹಚ್ಚಿ ಆದಷ್ಟು ಬೇಗ ನ್ಯಾಯ ದೊರಕಿಸಿ ಕೊಡಬೇಕೆಂದೂ ಅದು ಆಗ್ರಹಿಸಿದೆ.

ಇಂಡಿಯನ್ ನ್ಯಾಷನಲ್ ಓವರ್ ಸೀಸ್ ಕಾಂಗ್ರೆಸ್ ಕೂಡ ಘಟನೆಯನ್ನು ಖಂಡಿಸಿದ್ದು ಪ್ರಬಲ ಧ್ವನಿಯೊಂದರ ಸದ್ದಡಗಿಸುವ ಉದ್ದೇಶದಿಂದ ನಡೆದ ಪೂರ್ವಯೋಜಿತ ಕೃತ್ಯ ಇದಾಗಿರಬೇಕೆಂದು ಶಂಕಿಸಿದೆ.

ಯುನೆಸ್ಕೋ ಪ್ರಧಾನ ನಿರ್ದೇಶಕಿ ಐರೀನಾ ಬೊಕೊವ ಅವರೂ ಕೊಲೆ ಕೃತ್ಯವನ್ನು ಖಂಡಿಸಿದ್ದಾರಲ್ಲದೆ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News