×
Ad

ಕದ್ದ ಚಿನ್ನ ಮಾರಾಟ ಮಾಡಿದವರಿಂದ ‘ಸಿಟ್’ ತನಿಖೆ: ಎಚ್.ಡಿ.ಕುಮಾರಸ್ವಾಮಿ

Update: 2017-09-08 19:06 IST

ಬೆಂಗಳೂರು, ಸೆ.8: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಸಿಟ್) ಬಗ್ಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿ, ವಶಕ್ಕೆ ಪಡೆದ ಕದ್ದ ಚಿನ್ನವನ್ನು ಮಾರಾಟ ಮಾಡಿ ನಿವೇಶನ ಖರೀದಿ ಮಾಡಿರುವ ಅಧಿಕಾರಿಯಿಂದ ಯಾವ ತನಿಖೆ ನಿರೀಕ್ಷಿಸಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಶುಕ್ರವಾರ ನಗರದ ಜೆಡಿಎಸ್ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಬೂತ್ ಮಟ್ಟದ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಲದಿನಗಳ ಹಿಂದೆ ಕಳವು ಆಗಿದ್ದ 7 ಕೆಜಿಗೂ ಅಧಿಕ ಚಿನ್ನವನ್ನು ವಶಕ್ಕೆ ತೆಗೆದುಕೊಂಡು ಅದರಲ್ಲಿ ಅರ್ಧಕ್ಕೂ ಹೆಚ್ಚು ಭಾಗವನ್ನು ಮಾರಾಟ ಮಾಡಿ ಬಾಣಸವಾಡಿ ವ್ಯಾಪ್ತಿಯಲ್ಲಿ ನಿವೇಶನ ಖರೀದಿಸಿದವರಿಗೆ ತನಿಖೆ ನೇತೃತ್ವ ವಹಿಸಲಾಗಿದೆ. ಅವರಿಂದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುವುದು ಎಷ್ಟು ಸರಿ ಎಂದು ದೂರಿದ್ದಾರೆ.

ರಾಜ್ಯ ಸರಕಾರ ಪ್ರಾಮಾಣಿಕ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತನಿಖೆ ನಡೆಸಬೇಕು. ಗೌರಿ ಲಂಕೇಶ್ ಹತ್ಯೆ ಪ್ರಕರಣವು ಗಂಭೀರ ಸ್ವರೂಪದ್ದಾಗಿದ್ದು, ಆರೋಪಿಗಳ ಪತ್ತೆಗೆ ಪ್ರಾಮಾಣಿಕ ಅಧಿಕಾರಿಯ ನೇತೃತ್ವದ ತಂಡ ಬಹಳ ಮುಖ್ಯವಾಗಿರುತ್ತದೆ ಎಂದು ನುಡಿದರು.

ಕೆಂಪಯ್ಯ ವಿರುದ್ಧ ಕಿಡಿ:  ಸಿಟ್ ರಚನೆ ಮಾಡಿರುವ ಬಗ್ಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ಗಮನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಂದಿದ್ದಾರೋ ಅಥವಾ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಸಲಹೆ ಮೇರೆಗೆ ತಂಡವನ್ನು ರಚನೆ ಮಾಡಲಾಗಿದೆಯೋ ಎಂಬುದರ ಕುರಿತು ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕು ಎಂದರು.

ಗೌರಿ ಲಂಕೇಶ್ ಅವರ ಹತ್ಯೆ ನಡೆದು ಮೂರು ದಿನ ಕಳೆದರೂ ಒಂದೇ ಒಂದು ಸುಳಿವು ಪತ್ತೆ ಹಚ್ಚಿಲ್ಲ. ಇನ್ನು ಸಿಸಿ ಕ್ಯಾಮೆರಾ ನೋಡಲಾಗುತ್ತಿದೆ ಎಂದ ಅವರು, ಈ ಪ್ರಕರಣವನ್ನು ಕೇಂದ್ರ ಸರಕಾರವು ನಕ್ಸಲ್ ಕೃತ್ಯದ ಬಗ್ಗೆ ಶಂಕೆ ವ್ಯಕ್ತಪಡಿಸಿದೆ. ಮಾಹಿತಿ ಇಲ್ಲದೆ ಸುಮ್ಮನೆ ಆರೋಪ ಮಾಡಲು ಸಾಧ್ಯವಿಲ್ಲ. ಪ್ರತೀ ರಾಜ್ಯದಲ್ಲಿಯೂ ಕೇಂದ್ರಕ್ಕೆ ಮಾಹಿತಿ ನೀಡುವ ಅಧಿಕಾರಿಗಳಿದ್ದಾರೆ. ಈ ಸಂಬಂಧ ರಾಜ್ಯ ಸರಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಬಿಜೆಪಿಗೆ ಬೈಕ್ ರ್ಯಾಲಿಯೇ ಮುಖ್ಯವಾಗಿದೆ. ಇದನ್ನು ಹತ್ತಿಕ್ಕಲು ರಾಜ್ಯ ಸರಕಾರ ದೊಡ್ಡ ಸರ್ಕಸ್ ನಡೆಸಿತು. ಶಾಂತಿ ಕದಡಲು ಎರಡೂ ಪಕ್ಷಗಳು ಮಂಗಳೂರನ್ನು ಆಯ್ಕೆ ಮಾಡಿಕೊಂಡ್ದಿದಾರೆ. ಅಶಾಂತಿ ಸೃಷ್ಟಿಸಲು ಬಿಜೆಪಿ ರ್ಯಾಲಿ ನಡೆಸಿದ್ದು, 30 ಜಿಲ್ಲೆಗಳಿಗೂ ಇದನ್ನು ವಿಸ್ತರಣೆ ಮಾಡಲು ಯೋಜನೆ ರೂಪಿಸಿತ್ತು ಎಂದು ಬಿಜೆಪಿ ರ್ಯಾಲಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News