×
Ad

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

Update: 2017-09-08 20:13 IST

ಬೆಂಗಳೂರು, ಸೆ.8: ‘ಅಮೀರೆ ಶರಿಯತ್’ ಮೌಲಾನ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಬಾಖ್ವಿ(77) ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ನಗರದ ದಾರೂಲ್ ಉಲೂಮ್ ಸಬೀಲುರ್ರಶಾದ್‌ನಲ್ಲಿ ಇರಿಸಲಾಗಿರುವ ಅಶ್ರಫ್ ಅಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ವೌಲಾನ ಅಶ್ರಫ್ ಅಲಿ ಓರ್ವ ಜಾತ್ಯತೀತ ವ್ಯಕ್ತಿಯಾಗಿದ್ದರು. ಎಲ್ಲ ಸಮುದಾಯಗಳೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡಿದ್ದರು. ಇತ್ತೀಚೆಗೆ ಬಕ್ರೀದ್ ಹಬ್ಬಕ್ಕೆ ಮುಂಚಿತವಾಗಿ ಮುಸ್ಲಿಂ ಧಾರ್ಮಿಕ ಮುಖಂಡರೊಂದಿಗೆ ಕೃಷ್ಣಾದಲ್ಲಿ ನಡೆಸಿದ ಸಭೆಯಲ್ಲಿ ಅವರನ್ನು ಭೇಟಿಯಾಗಿದ್ದೆ ಎಂದು ಸಿದ್ದರಾಮಯ್ಯ ಸ್ಮರಿಸಿಕೊಂಡರು.

ಅನೇಕ ವರ್ಷಗಳಿಂದ ನಾನು ಅವರನ್ನು ಬಲ್ಲೆ. ಸದಾ ಹಸನ್ಮುಖಿಯಾಗಿರುತ್ತಿದ್ದ ಅವರು ಮುಸ್ಲಿಮ್ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದರು. ಧಾರ್ಮಿಕ ಹಾಗೂ ಸಾಮಾಜಿಕ ವಿಚಾರಗಳನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದರು. ಮುಸ್ಲಿಮ್ ಸಮುದಾಯದ ಪಾಲಿಗೆ ಅವರೊಬ್ಬ ಮಾರ್ಗದರ್ಶಕರಾಗಿದ್ದರು ಎಂದು ಅವರು ಬಣ್ಣಿಸಿದರು.

ದಾರೂಲ್ ಉಲೂಮ್ ಸಬೀಲುರ್ರಶಾದ್ ಒಂದು ಮಾದರಿ ಧಾರ್ಮಿಕ ಶೈಕ್ಷಣಿಕ ಸಂಸ್ಥೆ. ಕಳೆದ 50 ವರ್ಷಗಳಿಂದ ಅಶ್ರಫ್ ಅಲಿ ಅವರು ಇಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣವನ್ನು ನೀಡಿದ್ದಾರೆ. ಅವರ ನಿಧನದಿಂದಾಗಿ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ರೋಷನ್‌ಬೇಗ್, ರಾಜ್ಯಸಭಾ ಸದಸ್ಯ ಡಾ.ಕೆ.ರಹ್ಮಾನ್‌ಖಾನ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಸೀರ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News