ನಟ ಸುದರ್ಶನ್ ನಿಧನಕ್ಕೆ ಸಿಎಂ ಸಂತಾಪ
ಬೆಂಗಳೂರು, ಸೆ. 8: ಕನ್ನಡ ಚಲನಚಿತ್ರ ರಂಗದ ಸುಪ್ರಸಿದ್ಧ ನಟ ಆರ್.ಎನ್. ಸುದರ್ಶನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರತಿಭಾ ಸಾಗರ ಆರ್.ನಾಗೇಂದ್ರರಾಯರ ಪುತ್ರರಲ್ಲೊಬ್ಬರಾಗಿದ್ದ ಆರ್.ಎನ್.ಸುದರ್ಶನ್ ಕನ್ನಡವೂ ಸೇರಿ ವಿವಿಧ ಭಾಷೆಗಳ 125ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ನಂತರ, ಹಿರಿತೆರೆಯಿಂದ ಹಿಂದೆ ಸರಿದು ಕಿರಿತೆರೆಗೆ ಪ್ರವೇಶಿಸಿದ್ದರು. ಕೆಲ ದಿನಗಳ ಹಿಂದೆಯೂ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಅವರನ್ನು ಕಂಡ ನೆನಪು ಇನ್ನೂ ನನ್ನ ಮನದಲ್ಲಿ ಹಚ್ಚ ಹಸಿರಾಗಿದೆ ಎಂದರು.
ಸುದರ್ಶನ್ ಅವರು ಅಭಿನಯ ಮಾತ್ರವಲ್ಲ, ಗಾಯನ ಲೋಕದಲ್ಲೂ ವಿಶಿಷ್ಟ ಛಾಪು ಮೂಡಿಸಿದ್ದಾರೆ. ವಿಜಯನಗರದ ವೀರಪುತ್ರ ಚಿತ್ರದ ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಎಂಬ ಗೀತೆಯಲ್ಲಿನ ಸುದರ್ಶನ್ ಅವರ ಅಭಿನಯ ಸದಾ ನಮ್ಮ ಕಣ್ಣ ಮುಂದೆ ಸುಳಿದಾಡುವಂತಹುದು. ಅಂತೆಯೇ, ಪುಟ್ಟಣ್ಣ ಕಣಗಾಲ್ ನಿರ್ದೇಶನದ ಶುಭ ಮಂಗಳ ಚಿತ್ರದಲ್ಲಿ ಸುದರ್ಶನ್ ಅವರು ಹಾಡಿರುವ ‘ಹೂವೊಂದು ಬಳಿ ಬಂದು ತಾಗಿತು ಎನ್ನೆದೆಯಾ.. ಏನೆಂದು ಹೇಳಲಿ ಜೇನಂತ ಸಿಹಿ ನುಡಿಯಾ..’ ಗೀತೆ ಸದಾ ಕಾಲ ನಮ್ಮ ಕಿವಿಯಲ್ಲಿ ಹರಿದಾಡುವಂತಹುದು ಎಂದು ಸಿದ್ದರಾಮಯ್ಯ ಬಣ್ಣಿಸಿದ್ದಾರೆ.
ಸುದರ್ಶನ್ ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಶ್ರೀಯುತರ ಕುಟುಂಬ ವರ್ಗ ಹಾಗೂ ಅಭಿಮಾನಿ ವರ್ಗಕ್ಕೆ ಸುದರ್ಶನ್ ಅವರ ಅಗಲಿಕೆಯಿಂದ ಉಂಟಾದ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಸಿಎಂ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.