ವಿಧಾನಪರಿಷತ್ ಸದಸ್ಯರ ಮುಂದುವರೆದ ಅಹೋರಾತ್ರಿ ಧರಣಿ
ಬೆಂಗಳೂರು, ಸೆ.8: ಶೈಕ್ಷಣಿಕ ಕ್ಷೇತ್ರದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯ ವಿಧಾನಪರಿಷತ್ ಸದಸ್ಯರು ವಿಧಾನಸೌಧ ಹಾಗೂ ವಿಕಾಸಸೌಧದ ಮಧ್ಯೆಯಿರುವ ಮಹಾತ್ಮಗಾಂಧಿ ಪ್ರತಿಮೆ ಬಳಿ ನಡೆಸುತ್ತಿರುವ ಅಹೋರಾತ್ರಿ ಧರಣಿಯನ್ನು ಸೆ.15ರವರೆಗೆ ಮುಂದುವರೆಸಲು ನಿರ್ಧರಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ಪ್ರಾಥಮಿಕ, ಪ್ರೌಢ ಶಿಕ್ಷಕರು ಹಾಗೂ ಪಿಯುಸಿ ಉಪನ್ಯಾಸಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾವು ಆರಂಭಿಸಿರುವ ಪ್ರತಿಭಟನಾ ಧರಣಿಯನ್ನು ಯಾವುದೆ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೆ.15ರಂದು ಸಭೆ ನಿಗದಿಯಾಗಿದ್ದು, ಅಲ್ಲಿ ಕೈಗೊಳ್ಳುವ ತೀರ್ಮಾನಗಳನ್ನು ಆಧರಿಸಿ ನಮ್ಮ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚಿಂತನೆ ನಡೆಸಲಾಗುವುದು. ಆದರೆ, ಈ ಬಾರಿ ನಡೆಯುವ ಸಭೆಯಲ್ಲಿ ಸರಕಾರ ನೀಡುವ ಆಶ್ವಾಸನೆಗಳು ಆದೇಶದ ರೂಪದಲ್ಲಿ ಹೊರಬರುವ ವರೆಗೆ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ರಾಜ್ಯ ಸರಕಾರದ ಮೇಲೆ ಒತ್ತಡ ಹೇರಲು ಸೆ.14ರಂದು ರಾಜ್ಯಾದ್ಯಂತ ಶಾಲಾ, ಕಾಲೇಜುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಸೆ.15ರಂದು ಸಭೆ ಕರೆದಿರುವ ಹಿನ್ನೆಲೆಯಲ್ಲಿ, ಅವರಿಗೆ ಮಾತಿಗೆ ಗೌರವಕೊಟ್ಟು ಶಾಲಾ, ಕಾಲೇಜು ಬಂದ್ ಮಾಡುವ ನಿರ್ಧಾರವನ್ನು ಮುಂದೂಡಲಾಗಿದೆ ಎಂದು ಬಸವರಾಜ ಹೊರಟ್ಟಿ ಹೇಳಿದರು.
ಪ್ರಾಥಮಿಕ, ಪ್ರೌಢ ಶಾಲೆಯ ಶಿಕ್ಷಕರು ಹಾಗೂ ಪಿಯು ಉಪನ್ಯಾಸಕರ ಪರವಾಗಿ ವಿದ್ಯಾರ್ಥಿಗಳಿಗೆ ಯಾವುದೆ ರೀತಿಯ ತೊಂದರೆಯಾಗದಂತೆ ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮೂರು ಪಕ್ಷಗಳ ವಿಧಾನಪರಿಷತ್ ಸದಸ್ಯರು ಅಹೋರಾತ್ರಿ ಧರಣಿಯನ್ನು ಮುಂದುವರೆಸುತ್ತೇವೆ ಎಂದು ಅವರು ತಿಳಿಸಿದರು.
ಮಾಜಿ ಉಪಸಭಾಪತಿ ಹಾಗೂ ಜೆಡಿಎಸ್ ಸದಸ್ಯ ಪುಟ್ಟಣ್ಣ ಮಾತನಾಡಿ, ಆರ್ಥಿಕ ಇಲಾಖೆಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ವೇತನ ವಿಚಾರವನ್ನು ಹೊರತುಪಡಿಸಿ, ಕಾರ್ಮಿಕ, ಸಮಾಜ ಕಲ್ಯಾಣ, ಉನ್ನತ ಶಿಕ್ಷಣ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಸಚಿವರು ಎಚ್ಚೆತ್ತುಕೊಂಡು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಶಿಕ್ಷಕರು ಹಾಗೂ ಉಪನ್ಯಾಸಕರ ಬಹುತೇಕ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ ಎಂದರು.
ರಾಜ್ಯ ಸರಕಾರವು ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಾವಿರಾರು ಕೋಟಿ ರೂ. ಅನುದಾನ ನೀಡಿರುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ, ಈ ಭಾಗದ ಸಮಸ್ಯೆಗಳು ಮಾತ್ರ ಪರಿಹಾರವಾಗುತ್ತಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಒದಗಿಸುತ್ತಿರುವ ಅನುದಾನ ಪೂರ್ಣಪ್ರಮಾಣದಲ್ಲಿ ಬಳಕೆಯಾದರೆ ಮಾತ್ರ ಸಮಸ್ಯೆಗಳು ಬಗೆಹರಿಯಬಹುದಾಗಿದೆ ಎಂದು ಬಿಜೆಪಿ ಸದಸ್ಯ ಅಮರನಾಥ ಪಾಟೀಲ್ ಅಭಿಪ್ರಾಯಪಟ್ಟರು.
ಅಹೋರಾತ್ರಿ ಧರಣಿಯಲ್ಲಿ ಬಿಜೆಪಿ ಹಿರಿಯ ಸದಸ್ಯ ರಾಮಚಂದ್ರಗೌಡ, ವಿರೋಧ ಪಕ್ಷದ ಸಚೇತಕ ಕ್ಯಾಪ್ಟರ್ ಗಣೇಶ್ ಕಾರ್ಣಿಕ್, ಅರುಣ್ ಶಹಾಪುರ್, ಜೆಡಿಎಸ್ ಸದಸ್ಯರಾದ ಶ್ರೀಕಂಠೇಗೌಡ, ರಮೇಶ್‌ಬಾಬು, ಕಾಂಗ್ರೆಸ್ ಸದಸ್ಯ ಶರಣಪ್ಪ ಮಟ್ಟೂರು ಪಾಲ್ಗೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಬೇಡಿಕೆಗಳ ಕುರಿತು ಚರ್ಚೆ ನಡೆಸಲು ಸೆ.15ರಂದು ಸಭೆ ಕರೆದಿದ್ದಾರೆ. ಆ ಸಭೆಯನ್ನು ಇದೇ ರವಿವಾರ(ಸೆ.10) ನಡೆಸಲಿ. ಮುಖ್ಯಮಂತ್ರಿಯ ಅನುಪಸ್ಥಿತಿಯಲ್ಲೂ ಅನೇಕ ಬೇಡಿಕೆಗಳನ್ನು ಈಡೇರಿಸಬಹುದು. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ಸೇಠ್ ಗಮನ ಹರಿಸಲಿ ಎಂದು ಉಪಸಭಾಪತಿ ಮರಿತಿಬ್ಬೇಗೌಡ ಆಗ್ರಹಿಸಿದರು.