ಕೇಂದ್ರ ಸರಕಾರ ಬೌದ್ಧಿಕ ವಲಯದ ದ್ವೇಷಿ: ಡಾ.ಮೂಡ್ನಕೂಡು ಚಿನ್ನಸ್ವಾಮಿ
ಬೆಂಗಳೂರು, ಸೆ. 8: ಬೌದ್ಧಿಕ ವಲಯ ಕುರಿತು ಕೇಂದ್ರ ಸರಕಾರಕ್ಕಿರುವ ಸಂಕುಚಿತ ಭಾವನೆಯಿಂದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ರೀತಿಯ ಅನಾಹುತಗಳು ಸಂಭವಿಸುತ್ತಿವೆ ಎಂದು ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಗರದ ಕಸಾಪದಲ್ಲಿ ಮಾನವಧರ್ಮ ಅಂತಾರಾಷ್ಟ್ರೀಯ ಪ್ರತಿಷ್ಠಾನ ಕವಿ ಜರಗನಹಳ್ಳಿ ಶಿವಂಶಂಕರ್ ಅವರು 69ನೆ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪ್ರಸ್ತುತ ಸಾಹಿತ್ಯ ಸಂದರ್ಭದ ಸ್ಥಿತ್ಯಂತರಗಳು ಎಂಬ ವಿಷಯ ಕುರಿತ ಚಿಂತನಾಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಬೌದ್ಧಿಕ ವಲಯದ ದ್ವೇಷಿ.ತನ್ನ ನಿರ್ದಿಷ್ಟ ಗುರಿಯನ್ನು ಸಾಧಿಸಲು ಸಂಕುಚಿತ, ಸೀಮಿತ ಭಾವನೆಗಳಿಗೆ ಮಾತ್ರ ಪ್ರಾಮುಖ್ಯತೆ ನೀಡುತ್ತಿರುವುದರಿಂದ ಗೌರಿ ಲಂಕೇಶ್‌ರಂತ ವಿಚಾರವಂತರ ಹತ್ಯೆಗಳು ಸಂಭವಿಸುತ್ತಿವೆ.ಗೌರಿ ಹತ್ಯೆಯಾದರೂ ಅವರ ವಿಚಾರಗಳ ಮೂಲಕ ಇನ್ನೂ ನಮ್ಮಲ್ಲಿ ಜೀವಂತವಾಗಿದ್ದಾರೆ ಎಂದರು.
ಬಿಜೆಪಿಯವರದ್ದು ಶತ್ರುಗಳನ್ನು ಸೃಷ್ಟಿಸುವ, ಯುದ್ಧಕ್ಕಾಗಿ ಕಾಲು ಕೆರೆದು ಕಾಯುವಂತ ಮನಸ್ಸು. ಕೇಂದ್ರ ಸರಕಾರದ ಈ ರೀತಿಯ ಧೋರಣೆಗಳು ಗೌರಿಗೆ ಇಷ್ಟವಾಗುತ್ತಿರಲಿಲ್ಲ. ಈ ಕಾರಣದಿಂದಲ್ಲೇ ಕೇಂದ್ರ ಸರಕಾರವನ್ನು ಕಟುವಾಗಿ ಟೀಕಿಸುತ್ತಿದ್ದರು ಎಂದು ಹೇಳಿದರು.
ವೈದಿಕ ಧರ್ಮದ ಮೂಲ ಶಕ್ತಿ ಹಿಂಸೆ, ಯುದ್ಧ, ಬಲಿ ಮೇಲೆ ನಿಂತಿದೆ. ಇದನ್ನು ವಿರೋಧಿಸುವವರನ್ನು ಅಂತ್ಯವಾಡುತ್ತಾರೆ. ದೇಶದಲ್ಲಿ ಬುದ್ಧನು ಜನಿಸದೇ ಇದ್ದಿದ್ದರೆ, ಈ ದೇಶದ ಚಿತ್ರಣವೇ ಬೇರೆ ಇರುತ್ತಿತ್ತು. ಜಾತಿ, ಅಸ್ಪಶ್ಯತೆ, ಮೌಢ್ಯ, ಭ್ರಷ್ಟಾಚಾರ ತುಂಬಿರುವ ನಮ್ಮ ದೇಶ ಕೊಳಕಾಗಿದೆ. ಇದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಈ ವೇಳೆ ಕವಿ ಜರಗನಹಳ್ಳಿ ಶಿವಶಂಕರ್ ದಂಪತಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೊ.ಎಲ್.ಎನ್.ಮುಕುಂದ್‌ರಾಜ್, ಡಾ.ತಮಿಳ್ ಸೆಲ್ವಿ, ಡಾ.ಎಚ್.ಎಲ್.ಪುಷ್ಪ ಸೇರಿದಂತೆ ಇತರರು ಇದ್ದರು.