×
Ad

ಮತೀಯವಾದಕ್ಕೆ ಧರ್ಮ ಸಹಿಷ್ಣುತೆಯೇ ಮದ್ದು: ಸಿಎಂ ಸಿದ್ದರಾಮಯ್ಯ

Update: 2017-09-08 21:18 IST

ಬೆಂಗಳೂರು, ಸೆ.8: ರಾಜ್ಯದ ಎಲ್ಲ ಜಾತಿ, ಧರ್ಮದ ಜನತೆ ಧರ್ಮ ಸಹಿಷ್ಣುತರಾಗಿ ಬಾಳ್ವೆ ನಡೆಸುವ ಮೂಲಕ ಮತೀಯವಾದವನ್ನು ಬೇರು ಸಮೇತ ಕಿತ್ತೊಗೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶುಕ್ರವಾರ ಶಿವಾಜಿ ನಗರದಲ್ಲಿರುವ ಸೈಂಟ್ ಮೇರಿ ಬೆಸಿಲಿಕಾ ಚರ್ಚ್‌ನಲ್ಲಿ ಆಯೋಜಿಸಿದ್ದ ‘ಸಂತ ಮೇರಿ ಉತ್ಸವ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚುತ್ತಿರುವ ಮತೀಯವಾದಕ್ಕೆ ಧರ್ಮ ಸಹಿಷ್ಣುತೆಯೇ ಪರಿಹಾರವೆಂದು ತಿಳಿಸಿದರು.

ಜಗತ್ತಿನಲ್ಲಿರುವ ಎಲ್ಲ ಧರ್ಮಗಳು ಶಾಂತಿ, ಸಹಬಾಳ್ವೆಯನ್ನು ಬೋಧಿಸುತ್ತವೆ. ಆದರೆ, ಕೆಲವು ಪಟ್ಟಭದ್ರರು ಧರ್ಮಗಳ ನಿಜವಾದ ಸಾರವನ್ನು ತಿರುಚುವ ಮೂಲಕ ಮತೀಯ ಗಲಭೆಗಳನ್ನು ಸೃಷ್ಟಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಇಂತಹವರಿಗೆ ರಾಜ್ಯದ ಸಾಮಾನ್ಯ ಜನತೆ ಒಟ್ಟಾಗಿ ಬಾಳ್ವೆ ನಡೆಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದರು.

ಇಂದು ಶಿವಾಜಿನಗರದಲ್ಲಿ ಎಲ್ಲ ಜಾತಿ-ಧರ್ಮಗಳ ಲಕ್ಷಾಂತರ ಜನತೆ ಸಂತ ಮೇರಿ ಉತ್ಸವದಲ್ಲಿ ಭಾಗಿಗಳಾಗಿದ್ದಾರೆ. ಇಂತಹ ಸಹಬಾಳ್ವೆ ಪ್ರತಿದಿನವೂ ಇರಲಿ. ನನಗೂ ಸಂತ ಮೇರಿ ಉತ್ಸವದಲ್ಲಿ ಭಾಗವಹಿಸಿದ್ದಕ್ಕೆ ಅತೀವ ಸಂತೋಷವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದರು.

ಲಕ್ಷಾಂತರ ಭಕ್ತರು ಭಾಗಿ: ಶಿವಾಜಿನಗರದಲ್ಲಿರುವ ಸೆಂಟ್ ಮೇರಿ ಬೆಸಲಿಕ ಚರ್ಚ್‌ನಲ್ಲಿ ಆಯೋಜಿಸಿದ್ದ ಸಂತ ಮೇರಿ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಶಿವಾಜಿನಗರ ಬಸ್ ನಿಲ್ದಾಣದ ಸುತ್ತಮುತ್ತಲಿರುವ ಜಾಗಗಳಲ್ಲಿ ಭಕ್ತರು ಗಂಟೆ-ಗಟ್ಟಲೇ ನಿಂತುಕೊಂಡೇ ದೇವರನ್ನು ಸ್ತುತಿಸಿದರು.

ಸಂತ ಮೇರಿ ಉತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದು ಖುಷಿ ತಂದಿದೆ. ಮುಂದಿನ ಬಾರಿಯೂ ಸಿದ್ದರಾಮಯ್ಯರವರೇ ರಾಜ್ಯದ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿ ರಾಜ್ಯವನ್ನು ಸೌಹಾರ್ದತೆಯತ್ತ ಮುನ್ನಡೆಸಲಿ.
-ಆರ್ಚ್ ಬಿಷಪ್ ಡಾ.ಬರ್ನಾಡ್ ಮೋರಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News