ಅಕ್ರಮ ಗೋಹತ್ಯೆ ತಡೆಯಲು ಇರುವ ಕಾನೂನು ಬಗ್ಗೆ ಹೈಕೋರ್ಟ್‌ಗೆ ಮಾಹಿತಿ ನೀಡಿದ ಸರಕಾರ
ಬೆಂಗಳೂರು, ಸೆ.8: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಶಿವಾಜಿನಗರದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಂಗ್ರಹಿಸಿದ ಹಾಗೂ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುವುದನ್ನು ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೆ.12ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿ ಅರವಿಂದ್‌ಕುಮಾರ್ ಅವರಿದ್ದ ನ್ಯಾಯಪೀಠಕ್ಕೆ ಸರಕಾರಿ ಅಭಿಯೋಜಕ ರಾಜಯ್ಯ ಅವರು ಅಕ್ರಮ ಗೋಹತ್ಯೆ ತಡೆಯಲು ಇರುವ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ಈ ಮಾಹಿತಿ ಆಲಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಸೆ.12ಕ್ಕೆ ಮುಂದೂಡಿತು.
ಶಿವಾಜಿನಗರದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಂಗ್ರಹಿಸಿರುವ ಆರೋಪದ ಸಂಬಂಧ ಸ್ಥಳ ಪರಿಶೀಲನೆ ನಡೆಸಲು ನೇಮಿಸಿದ್ದ ಕೋರ್ಟ್ ಕಮಿಷನರ್‌ಗಳಿಗೆ ಸಹಕಾರ ನೀಡದ ಹಾಗೂ ಜಾನುವಾರುಗಳ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ನೀಡಿದ್ದ ಆದೇಶ ಪಾಲಿಸದ ಶಿವಾಜಿನಗರ ಪೊಲೀಸರ ವಿರುದ್ಧ ಹೈಕೋರ್ಟ್ ಸೆ.6ರಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅಕ್ರಮ ಗೋಹತ್ಯೆ ತಡೆಯಲು ಇರುವ ಕಾನೂನುಗಳನ್ನು ಜಾರಿಗೊಳಿಸುವ ಸಂಬಂಧ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಸೂಚಿಸಿತ್ತು. ಹೀಗಾಗಿ, ಸರಕಾರಿ ಅಭಿಯೋಜಕ ರಾಜಯ್ಯ ಅವರು ಅಕ್ರಮ ಗೋಹತ್ಯೆ ತಡೆಯಲು ಇರುವ ಕಾನೂನುಗಳ ಬಗ್ಗೆ ಶುಕ್ರವಾರ ಮಾಹಿತಿ ನೀಡಿದರು.