ಫೈನಲ್‌ಗೆ ಲಗ್ಗೆ ಇಟ್ಟಿರುವ ದ.ಆಫ್ರಿಕದ ಆ್ಯಂಡರ್ಸನ್‌ಗೆ ನಡಾಲ್ ಸವಾಲು

Update: 2017-09-09 04:54 GMT

ನ್ಯೂಯಾರ್ಕ್, ಸೆ.9: ಸ್ಟಾರ್ ಆಟಗಾರ ರಫೆಲ್ ನಡಾಲ್ ಯುಎಸ್ ಓಪನ್‌ನ ಪುರುಷರ ಸಿಂಗಲ್ಸ್ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಇದೇ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೆ ತೇರ್ಗಡೆಯಾಗಿರುವ ದಕ್ಷಿಣ ಆಫ್ರಿಕದ ಕೆವಿನ್ ಆ್ಯಂಡರ್ಸನ್‌ರನ್ನು ಎದುರಿಸಲಿದ್ದಾರೆ.

ಆರಡಿ 8 ಇಂಚು ಎತ್ತರದ ಆ್ಯಂಡರ್ಸನ್ ಶುಕ್ರವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಸ್ಪೇನ್‌ನ ಪಾಬ್ಲೊ ಕರ್ರೆನೊ ಬುಸ್ಟಾರನ್ನು 4-6, 7-5, 6-3, 6-4 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

ಮಾಜಿ ವಿಶ್ವದ ನಂ.1 ಆಟಗಾರ ಆ್ಯಂಡಿ ಮರ್ರೆ ಅನುಪಸ್ಥಿತಿಯ ಲಾಭ ಪಡೆದಿರುವ ಆ್ಯಂಡರ್ಸನ್ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ನಡಾಲ್ ಸವಾಲು ಎದುರಿಸಲಿದ್ದಾರೆ.

ವಿಶ್ವ ರ್ಯಾಂಕಿಂಗ್‌ನಲ್ಲಿ 32ನೆ ಸ್ಥಾನದಲ್ಲಿರುವ ಆ್ಯಂಡರ್ಸನ್ 2008ರ ಬಳಿಕ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ ಕೆಳ ರ್ಯಾಂಕಿನ ಮೊದಲ ಆಟಗಾರನಾಗಿದ್ದಾರೆ. ಫ್ರಾನ್ಸ್‌ನ ಜೋ-ವಿಲ್ಫ್ರೆಡ್ ಸೋಂಗ 2008ರ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ತಲುಪಿದ ಕೆಳ ರ್ಯಾಂಕಿನ ಆಟಗಾರನಾಗಿದ್ದರು.

ಎರಡನೆ ಸೆಮಿ ಫೈನಲ್‌ನಲ್ಲಿ ಮೊದಲ ಸೆಟ್ ಸೋಲಿನಿಂದ ಬೇಗನೆ ಚೇತರಿಸಿಕೊಂಡಿರುವ ರಫೆಲ್ ನಡಾಲ್ ಅವರು ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊರನ್ನು 4-6, 6-0, 6-3, 6-2 ಸೆಟ್‌ಗಳ ಅಂತರದಿಂದ ಮಣಿಸಿ ಫೈನಲ್‌ಗೆ ತಲುಪಿದ್ದಾರೆ. ನಡಾಲ್ 16ನೆ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ರೋಜರ್-ಟೆಕಾವುಗೆ ಪುರುಷರ ಡಬಲ್ಸ್ ಪ್ರಶಸ್ತಿ

ನ್ಯೂಯಾರ್ಕ್, ಸೆ.9: ಹಾಲೆಂಡ್‌ನ ಜಿಯಾನ್-ಜುಲಿಯೆನ್ ರೋಜರ್ ಹಾಗೂ ರೊಮಾನಿಯದ ಹೊರಿಯಾ ಟೆಕಾವು ಚೊಚ್ಚಲ ಯುಎಸ್ ಓಪನ್ ಗ್ರಾನ್‌ಸ್ಲಾಮ್ ಡಬಲ್ಸ್ ಪ್ರಶಸ್ತಿಯನ್ನು ಜಯಿಸಿದ್ದಾರೆ.

 12ನೆ ಶ್ರೇಯಾಂಕದ ರೋಜರ್ ಹಾಗೂ ಟೆಕಾವು ಕೇವಲ 86 ನಿಮಿಷಗಳ ಫೈನಲ್ ಹಣಾಹಣಿಯಲ್ಲಿ ಫೆಲಿಸಿಯಾನೊ ಲೊಪೆಝ್ ಹಾಗೂ ಮಾರ್ಕ್ ಲೊಪೆಝ್‌ರನ್ನು 6-4, 6-3 ನೇರ ಸೆಟ್‌ಗಳಿಂದ ಮಣಿಸಿ ಪ್ರಶಸ್ತಿ ಎತ್ತಿ ಹಿಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News