ಕಂಪ್ಯೂಟರಿನಲ್ಲಿ ಕನ್ನಡ ಪಠ್ಯ ನಮೂದನೆ

Update: 2017-09-09 19:23 GMT

ಡಿಜಿಟಲ್ ಕನ್ನಡ

ಪತ್ರಿಕಾ ಕಚೇರಿಗಳಲ್ಲಿ ವರದಿಗಾರರು ಲೇಖನಿಯನ್ನು ಪಕ್ಕಕ್ಕೆ ಎತ್ತಿಟ್ಟು ಕಂಪ್ಯೂಟರ್ ಕೀಲಿಮಣೆಯ ಮೇಲೆ ಪಟಪಟ ಕೈಯಾಡಿಸಿ ವರದಿಗಳನ್ನು ಸಿದ್ಧಪಡಿಸುವ ಕೆಲಸಗಳು ಆರಂಭವಾಗಿ ದಶಕಗಳೇ ಸಂದಿವೆ. ಸಿದ್ಧವಾದ ವರದಿಗಳನ್ನು ಉಪಸಂಪಾದಕರೂ ಕಂಪ್ಯೂಟರ್ ಬಳಸಿಯೇ ಸಂಪಾದನಾ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಈಗ ಬೇರೆಬೇರೆ ಪ್ರದೇಶದ ವರದಿಗಾರರು ನೇರವಾಗಿ ಕಂಪ್ಯೂಟರ್ ಪಠ್ಯವನ್ನೇ ಪತ್ರಿಕಾಲಯಕ್ಕೆ ಕಳುಹಿಸಬೇಕು. ಲೇಖನಗಳನ್ನು ಆಹ್ವಾನಿಸುವ ಪತ್ರಿಕೆಗಳು ಸಹ ‘‘ನುಡಿ, ಬರಹ ಅಥವಾ ಯೂನಿಕೋಡ್‌ನಲ್ಲಿಯೂ ಲೇಖನಗಳನ್ನು ಇ-ಮೇಯ್ಲಿ ಮೂಲಕ ಕಳುಹಿಸಬಹುದು’’ ಎಂಬ ಸೂಚನೆಗಳನ್ನು ಮುದ್ರಿಸುತ್ತಿವೆ. ಅವು - ಸರಕಾರಿ ಕಚೇರಿಗಳು, ಕಂಪೆನಿಗಳು, ಪತ್ರಿಕಾಲಯಗಳು, ಮುದ್ರಣಾಲಯಗಳು - ಯಾವುದೇ ಆಗಿರಬಹುದು, ‘ಹಾರ್ಡ್‌ಕಾಪಿ’ಯನ್ನು (ಮುದ್ರಿತ ಪ್ರತಿ) ಪೋಸ್ಟ್ ಮೂಲಕ ಕಳುಹಿಸುವುದಕ್ಕಿಂತ, ‘ಸಾಫ್ಟ್‌ಕಾಪಿ’ಯನ್ನು (ಕಂಪ್ಯೂಟರ್ ಟೆಕ್ಸ್ಟ್ ಫೈಲ್) ಅಟ್ಯಾಚ್ ಮಾಡಿ ಇ-ಮೇಯ್ಲಾ ಕಳುಹಿಸಿ ಎಂಬ ವಿನಂತಿಯೇ ಎಲ್ಲೆಡೆ ಅನುರಣಿಸುತ್ತಿದೆ.

ಮ್ಯಾನುವಲ್ ಟೈಪ್‌ರೈಟರ್‌ಗಳು ಮ್ಯೂಸಿಯಂ ಸೇರಿಕೊಂಡವು. ಕಚೇರಿ ಆಧುನಿಕರಣದ ಹೆಸರಿನಲ್ಲಿ ಟೈಪ್‌ರೈಟರ್‌ಗಳ ಸ್ಥಾನವನ್ನು ಪರ್ಸನಲ್ ಕಂಪ್ಯೂಟರ್‌ಗಳ ಆಕ್ರಮಿಸಿಕೊಂಡಿವೆ. ಕಂಪ್ಯೂಟರಿನ ಸರ್ವ ಸಾಮರ್ಥ್ಯವನ್ನು ಎಲ್ಲೆಡೆ ಬಳಸಲಾಗುತ್ತಿದೆಯಾದರೂ, ಕಂಪ್ಯೂಟರನ್ನು ಆಧುನಿಕ ಬೆರಳಚ್ಚು ಯಂತ್ರದಂತೆ ಬಳಸುತ್ತಿರುವುದೇ ಹೆಚ್ಚು. ಕೈಬರಹದಲ್ಲಿನ ಪತ್ರಗಳು, ಲೇಖನಗಳು ಇತ್ಯಾದಿಗಳನ್ನು ಕಂಪ್ಯೂಟರ್ ಬಳಸಿ ಟೈಪಿಂಗ್ ಮಾಡುವುದು ಟೈಪಿಸ್ಟ್‌ಗಳ ಕೆಲಸ. ಟೈಪಿಂಗ್ ಎಂಬ ಪದಕ್ಕೆ ಕನ್ನಡದಲ್ಲಿ ‘ಬೆರಳಚ್ಚು’ ಎಂಬ ಪದವನ್ನು ಬಳಸಲಾಗುತ್ತಿತ್ತು. ಈಗ ಬಯೋಮೆಟ್ರಿಕ್ ವ್ಯವಸ್ಥೆಯು ಬಂದ ನಂತರ, ಬೆರಳಚ್ಚು ಎಂಬ ಪದ ಹಲವು ಗೊಂದಲಗಳನ್ನು ಮೂಡಿಸುತ್ತಿದೆ. ಹೀಗಾಗಿ, ಬೆರಳಚ್ಚು ಎಂಬ ಪದವನ್ನು ಬಯೋಮೆಟ್ರಿಕ್ ಸಂದರ್ಭಕ್ಕೆ ಸೀಮಿತಗೊಳಿಸಿ ಕನ್ನಡದಲ್ಲಿ ‘ಟೈಪಿಂಗ್’ ಎಂದೇ ಬಳಸಲಾಗುತ್ತಿದೆ.

ಸರಕಾರಿ ಕಚೇರಿಗಳಲ್ಲಿ ಐ.ಎ.ಎಸ್. ಅಧಿಕಾರಿಗಳೂ ಸಹ ತಮ್ಮ ಪಿಎಗಳಿಗೆ (ಸ್ಟೆನೋಗ್ರಾಫರ್) ಡಿಕ್ಟೇಷನ್ ಕೊಡುವ ಕಾಲ ಮುಗಿದು ಹೋಗಿದೆ.ಬಹುತೇಕರು ತಾವೇ ಕಂಪ್ಯೂಟರ್ ಕೀಬೋರ್ಡ್ ಬಳಸಿ ಪತ್ರಗಳನ್ನು, ಟಿಪ್ಪಣಿಗಳನ್ನು ಸಿದ್ಧಪಡಿಸುವ ಕಾಲ ಬಂದಿದೆ. ಅಷ್ಟರಮಟ್ಟಿಗೆ, ಶೀಘ್ರಲಿಪಿಗಾರರಿಗೆ ಕೆಲಸವೇ ಇಲ್ಲ ಎಂಬಂತಾಗಿದೆ. ಟೈಪಿಸ್ಟ್‌ಗಳ ಕೆಲಸ ಸೀಮಿತಗೊಂಡಿದೆ.

ಹಿಂದೆ ಪತ್ರಿಕಾಲಯಗಳು ಮತ್ತು ಪ್ರಕಾಶನ ಸಂಸ್ಥೆಗಳಲ್ಲಿನ ಫೋಟೊ ಕಂಪೋಸಿಂಗ್ ಯಂತ್ರಗಳಲ್ಲಿ ಕೀ-ಆಪರೇಟರ್‌ಗಳು ಪಠ್ಯವನ್ನು ನಮೂದಿ ಸುವ ‘ಕೀ-ಇನ್’ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಇಂದು ವರದಿಗಾರರೇ ಸ್ವತಃ ಕೀ-ಆಪರೇಟರ್‌ಗಳಾಗಿ ತಮ್ಮ ವರದಿಗಳನ್ನು ಕಂಪ್ಯೂಟರ್ ಪಠ್ಯವನ್ನಾಗಿಸಬೇಕಾಗಿದೆ. ‘ಗಂಜಿ ಕುಡಿಯೋನ್‌ಗೆ ಮೀಸೆ ತೀಡೋ ನೊಬ್ಬ’ ಎಂಬ ಗಾದೆ ಇದೆ. ‘ಗಂಜಿ ಕುಡಿಯುವವರು ಎಂಬ ಈ ಅಧಿಕಾರಿ,ಲೇಖಕ, ವರದಿಗಾರ ಇತ್ಯಾದಿಯವರಿಗೆ ಹಿಂದೆ ‘ಟೈಪಿಸ್ಟ್’, ‘ಸ್ಟೆನೋಗ್ರಾಫರ್’, ‘ಕೀ-ಆಪರೇಟರ್’ ಎಂಬ ಮೀಸೆ ತೀಡುವವರ ಸೇವೆ ಇತ್ತು.

ಈಗ ಗಂಜಿ ಕುಡಿಯುವವರು ತಮ್ಮ ಮೀಸೆಯನ್ನು ತಾವೇ ತೀಡಿಕೊಳ್ಳಬೇಕು! ಹೀಗಾಗಿ, ಪ್ರತಿಯೊಬ್ಬರೂ ಸಹ ‘ಟೈಪಿಂಗ್’ ಅಂದರೆ, ‘ಕೀ-ಇನ್’ ಮಾಡುವುದನ್ನು ಕಲಿಯುವುದು ಅನಿವಾರ್ಯವಾಗಿದೆ. ಈಗ ವೇಗದ ಟೈಪಿಂಗ್ ಕಲಿಕೆಯನ್ನು ಅಭ್ಯಾ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

ಆಧುನಿಕ ಡಿಜಿಟಲ್ ಯುಗದಲ್ಲಿ ಇಷ್ಟೊಂದು ತಂತ್ರಜ್ಞಾನ ಮುಂದು ವರಿದಿದೆ ಇನ್ನೂ ಕಂಪ್ಯೂಟರಿನಲ್ಲಿ ಕನ್ನಡ ಪಠ್ಯ ನಮೂದನೆಗಾಗಿ ಈಗಲೂ ಕೀ-ಬೋರ್ಡ್ ಬಳಸಬೇಕೇ? ಎಂಬ ಪ್ರಶ್ನೆ ಆಗಾಗ ಕೇಳಿಬರುತ್ತದೆ. ಹೌದು, ಪುಟಗಟ್ಟಲೆ ಪಠ್ಯವನ್ನು (ಟೆಕ್ಸ್ಟ್) ಕಂಪ್ಯೂಟರಿನೊಳಗೆ ಸೃಷ್ಟಿಸಬೇಕಾದರೆ, ಕೀಬೋರ್ಡ್ ಬಳಸಿ ‘ಕೀ-ಇನ್’ ಮಾಡುವುದು ಅನಿವಾರ್ಯ. ಕಂಪ್ಯೂಟರಿಗೆ ಸಂಪರ್ಕಗೊಂಡ ‘ಡಿಜಿಟಲ್ ರೈಟಿಂಗ್ ಪ್ಯಾಡ್’ ಮತ್ತು ‘ಸ್ಟೈಲಸ್’ಗಳನ್ನು ಬಳಸಿ ಪಠ್ಯವನ್ನು ಬರೆಯಬಹುದು. (ಹ್ಯಾಂಡ್‌ರೈಟಿಂಗ್ ಇನ್‌ಪುಟ್) ಅದು ಇಂಗ್ಲಿಷ್ ಆಗಲಿ ಅಥವಾ ಕನ್ನಡವೇ ಆಗಿರಲಿ, ಹ್ಯಾಂಡ್‌ರೈಟಿಂಗ್ ವಿಧಾನದಲ್ಲಿ ಟೈಪಿಂಗ್‌ನಷ್ಟು ವೇಗವಾಗಿ ಪಠ್ಯನಮೂದನೆ ಸಾಧ್ಯವಿಲ್ಲ. ವಾಟ್ಸ್ ಆ್ಯಪ್, ಟ್ವಿಟರ್ ಅಥವಾ ಫೇಸ್‌ಬುಕ್‌ಗಳಲ್ಲಿ ಒಂದೆರಡು ವಾಕ್ಯಗಳನ್ನು ನಮೂದಿಸುವುದು ತಕ್ಷಣಕ್ಕೆ ಸುಲಭದ ಕೆಲಸ. ಉಕ್ತಲೇಖನ (ಡಿಕ್ಟೇಷನ್) ಪಡೆದು ಪಠ್ಯವನ್ನು ತಕ್ಷಣದಲ್ಲಿಯೇ ಸೃಷ್ಟಿಸುವ ಕನ್ನಡದ ‘ಸ್ಪೀಚ್-ಟು-ಟೆಕ್ಸ್ಟ್’ ತಂತ್ರಾಂಶಗಳು ಇನ್ನೂ ಶೈಶವಾವಸ್ಥೆಯಲ್ಲಿವೆ. ಒಂದೆರಡು ವಾಕ್ಯಗಳನ್ನು ಅವು ಸುಲಭವಾಗಿ ಮೂಡಿಸಬಲ್ಲವೇ ಹೊರತು, ನೂರಾರು ಪುಟಗಳ ಪಠ್ಯವನ್ನು ಕಂಪ್ಯೂಟರಿಗೆ ಊಡಿಸಲು ಕೀಬೋರ್ಡ್ ಬಳಕೆ ಅನಿವಾರ್ಯ. ಹೀಗಾಗಿ, ಪಠ್ಯನಮೂದನೆಗಾಗಿ ಕೀ-ಬೋರ್ಡ್‌ಗೆ ಎಲ್ಲರೂ ಶರಣಾಗಲೇಬೇಕು. ಟೈಪಿಂಗ್ ಎಲ್ಲರೂ ಕಲಿಯಲೇಬೇಕು.

ಕಂಪ್ಯೂಟರಿನಲ್ಲಿ ಪಠ್ಯದ ಕೀ-ಇನ್ ಕೆಲಸದ ವಿಚಾರ ಬಂದಾಗ, ಕನ್ನಡಕ್ಕಿಂತ ಇಂಗ್ಲಿಷ್ ಕೀ-ಇನ್ ಮಾಡುವುದು ಸುಲಭ ಎಂಬ ಅಭಿಪ್ರಾಯವಿದೆ. ಕಾರಣವೇನೆಂದರೆ, ಇಂಗ್ಲಿಷ್‌ನಲ್ಲಿ ಕೇವಲ 26 ಅಕ್ಷರಗಳಿವೆ. ಹೆಚ್ಚೆಂದರೆ, ಶಿಫ್ಟ್ ಕೀ ಬಳಸಿ, ಕ್ಯಾಪಿಟಲ್ ಅಕ್ಷರಗಳನ್ನು ಟೈಪ್‌ಮಾಡಬೇಕಾಗಬಹುದಷ್ಟೇ. ಆದರೆ, ಕನ್ನಡದಲ್ಲಿಯಾದರೋ, ಸರಿಸುಮಾರು 50 ಮೂಲಾಕ್ಷರಗಳು, ಗುಣಿತಾಕ್ಷರಗಳು, ಒತ್ತಕ್ಷರಗಳು ಮತ್ತು ಇವೆಲ್ಲವುಗಳ ಸಂಯೋಜನೆಯಾಗಿ ‘ಪೂರ್ಣಾಕ್ಷರಗಳು’ (ಸಿಲಬಲ್‌ಗಳು) ಇವೆಲ್ಲವನ್ನೂ ಮೂಡಿಸುವುದನ್ನು ಕಲಿಯುವುದು ಒಂದು ಸವಾಲಿನ ಕೆಲಸ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಇಂಗ್ಲಿಷ್ ಕೀಲಿಮಣೆಯನ್ನೇ ಕನ್ನಡಕ್ಕೂ (ಧ್ವನಿಯಾಧಾರಿತವಾಗಿ) ಅಳವಡಿಸಿರುವುದರಿಂದ, ಹೊಸದಾಗಿ ಕನ್ನಡ ಕೀ-ಇನ್ ಮಾಡುವುದನ್ನು ಕಲಿಯಲು ಕಷ್ಟವೇನಿಲ್ಲ ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ. ಈಗಾಗಲೇ ಇಂಗ್ಲಿಷ್ ಟೈಪಿಂಗ್ ತಿಳಿದಿದ್ದರೆ, ಕನ್ನಡದ ಅಕ್ಷರ ಸ್ಥಾನಗಳನ್ನು ತಿಳಿದು ಕನ್ನಡವನ್ನು ವೇಗವಾಗಿ ಟೈಪ್ ಮಾಡಬಹುದು. ವೇಗದ ಟೈಪಿಂಗ್ ಕಲಿಯಲು ಇಂಗ್ಲಿಷ್‌ನಲ್ಲಿದ್ದಂತೆ ಕನ್ನಡದಲ್ಲಿಯೂ ಸಹ ‘ಕೀಲಿಮಣೆ ಬೋಧಕ ಎಂಬ ‘ಟೈಪಿಂಗ್ ಟ್ಯೂಟರ್’ ಲಭ್ಯವಿರುವುದು ಕನ್ನಡದ ಕೀ-ಇನ್ ಕಲಿಕಾಭ್ಯಾಸವನ್ನು ಸುಲಭವಾಗಿಸಿದೆ. ಕೀ-ಬೋರ್ಡ್ ಬಳಸಿ ಕನ್ನಡದ ಟೈಪಿಂಗ್ ಕಲಿಕೆಯ ವಿವರಣೆ ಇದೇ ಅಂಕಣದಲ್ಲಿ ಈ ಹಿಂದಿನ ಸಾಪ್ತಾಹಿಕ ಸಂಚಿಕೆಯಲ್ಲಿ ಪ್ರಕಟವಾಗಿದೆ.

Writer - ಸತ್ಯನಾರಾಯಣ ಎ.

contributor

Editor - ಸತ್ಯನಾರಾಯಣ ಎ.

contributor

Similar News