ಜಪಾನ್‌ನಿಂದ ಮೊದಲ ರಕ್ಷಣಾ ಖರೀದಿ ಒಪ್ಪಂದವನ್ನು ಭಾರತವು ಅಂತಿಮಗೊಳಿಸುವ ಸಾಧ್ಯತೆ

Update: 2017-09-13 14:41 GMT

ಹೊಸದಿಲ್ಲಿ,ಸೆ,13: ಜಪಾನ್ ಪ್ರಧಾನಿ ಶಿಂಜೊ ಅಬೆ ಅವರ ಭಾರತ ಭೇಟಿ ಬುಧವಾರದಿಂದ ಆರಂಭಗೊಂಡಿದೆ. ಅವರ ಭೇಟಿಗೆ ಸಂಬಂಧಿಸಿದಂತೆ ವಿಸ್ತ್ರತ ಜಂಟಿ ಹೇಳಿಕೆಯು ಇನ್ನೂ ಸಿದ್ಧಗೊಳ್ಳುವ ಹಂತದಲ್ಲಿದೆಯಾದರೂ, ಉಭಯ ರಾಷ್ಟ್ರಗಳು ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಗಾಢಗೊಳಿಸಲು ಬಯಸಿವೆ ಎನ್ನಲಾಗಿದೆ. ಉಭಯ ರಾಷ್ಟ್ರಗಳ ವ್ಯೂಹಾತ್ಮಕ ಮತ್ತು ಆರ್ಥಿಕ ದೃಷ್ಟಿಕೋನಗಳು ಏಕರೂಪವಾಗಿರುವುದರಿಂದ ಜಪಾನ್ ಈಗ ವಿಶ್ವದಲ್ಲಿ ಭಾರತದ ಅತ್ಯಂತ ಆಪ್ತ ವ್ಯೂಹಾತ್ಮಕ ಸಂಭವನೀಯ ಪಾಲುದಾರನಾಗಿದೆ.

ರಕ್ಷಣೆ ಮತ್ತು ಪರಮಾಣು ತಂತ್ರಜ್ಞಾನ ಕ್ಷೇತ್ರದಲ್ಲಿ ಪರಸ್ಪರ ಸಹಕಾರದ ಮುಂದಿನ ಮಜಲು ತಲುಪಲು ಭಾರತ ಮತ್ತು ಜಪಾನ್ ಬಯಸಿವೆ. ಕಳೆದ ಕೆಲವು ವರ್ಷಗಳಿಂದಲೂ ಉಭಯ ಸರಕಾರಗಳ ನಡುವೆ ಯುಎಸ್-2 ಉಭಯಚರಿ ವಿಮಾನದ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದು, ಭಾರತವು ಈ ವಿಮಾನದ ಖರೀದಿಗಾಗಿ ಜಪಾನ್ ಜೊತೆ ತನ್ನ ಮೊದಲ ರಕ್ಷಣಾ ಖರೀದಿ ಒಪ್ಪಂದವನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ. ‘ಮೇಕ್ ಇನ್ ಇಂಡಿಯಾ’ದ ಕೆಲವು ನೀತಿಗಳೂ ಪ್ರಸ್ತಾಪಗೊಳ್ಳಬಹುದು, ಆದರೆ ಉಭಯ ರಾಷ್ಟ್ರಗಳು ಜಂಟಿ ಉತ್ಪಾದನೆ ಪ್ರಮುಖ ವಾಗಿರುವ ಭವಿಷ್ಯದತ್ತ ಕಣ್ಣು ನೆಟ್ಟಿವೆ. ಉಭಯ ರಾಷ್ಟ್ರಗಳ ಅಧಿಕಾರ ಶಾಹಿಯ ವಿಳಂಬ ಧೋರಣೆ ಮತ್ತು ಸಂಶಯ ಸ್ವಭಾವದಿಂದಾಗಿ ಇದಕ್ಕೆ ಕಾಲಾವಕಾಶ ಬೇಕಾಗಬಹು ದಾದರೂ ಆರಂಭದ ಅಡಚಣೆಯನ್ನು ನಿವಾರಿಸಿಕೊಳ್ಳಲು ಬಲವಾದ ರಾಜಕೀಯ ಇಚ್ಛಾಶಕ್ತಿಯು ಅಗತ್ಯವಾಗಿದೆ. ಇನ್ನೊಂದೆಡೆ ಉತ್ತರ ಕೊರಿಯಾ ಸೃಷ್ಟಿಸಿರುವ ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದು, ಜಪಾನ್ ತನಗೆ ಪ್ರಕ್ಷೇಪಕ ಮತ್ತು ದಾಳಿ ಕ್ಷಿಪಣಿಗಳನ್ನು ಪೂರೈಸಬಲ್ಲ ರಕ್ಷಣಾ ಸಹಭಾಗಿತ್ವಕ್ಕಾಗಿ ಅರಸಾಟ ನಡೆಸುತ್ತಿದೆ. ಕಳೆದ ವಾರ ದಿಲ್ಲಿಗೆ ಭೇಟಿ ನೀಡಿದ್ದ ಅಬೆಯವರ ಅತ್ಯುನ್ನತ ವಿದೇಶಾಂಗ ನೀತಿ ಸಲಹೆಗಾರ ಕತ್ಸುಯುಕಿ ಕವಾಯ್ ಅವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದರು.

ಚೀನಾದ ಸವಾಲು ಎದುರಿಸುವ ನಿಟ್ಟಿನಲ್ಲಿ ಭಾರತ ಮತ್ತು ಜಪಾನ್ ಏಷ್ಯನ್ ಮತ್ತು ಆಫ್ರಿಕನ್ ರಾಷ್ಟ್ರಗಳಲ್ಲಿ ಬೃಹತ್ ಮೂಲಸೌಕರ್ಯ ಮತ್ತು ಸಂಪರ್ಕ ಯೋಜನೆಗಳನ್ನು ಆರಂಭಿಸಲು ಪರಸ್ಪರ ಕೈಜೋಡಿಸುತ್ತಿವೆ. ಏಷ್ಯಾ-ಆಫ್ರಿಕಾ ಬೆಳವಣಿಗೆ ಕಾರಿಡಾರ್ ನಿಧಾನವಾಗಿ ತಲೆಯೆತ್ತುತ್ತಿದೆಯಾದರೂ ಅದು ಚೀನಾದ ‘ಒನ್ ಬೆಲ್ಟ್ ಒನ್ ರೋಡ್’ನಂತೆ ವೇಗ ಪಡೆದುಕೊಳ್ಳುತ್ತದೆ ಎಂಬ ನಿರೀಕ್ಷೆಯಿಲ್ಲ. ಹೀಗಾಗಿ ಭಾರತ ಮತ್ತು ಜಪಾನ್ ಹೆಚ್ಚೆಚ್ಚು ಸ್ಥಳೀಯ ಹಿತಾಸಕ್ತಿಗಳ ಸಹಭಾಗಿತ್ವದ ವಿಭಿನ್ನ ಚಿಂತನೆಯನ್ನು ನಡೆಸಿವೆ.

ನಾಗರಿಕ ಪರಮಾಣು ಒಪ್ಪಂದ ಪೂರ್ಣಗೊಳ್ಳುವುದರೊಂದಿಗೆ ಭಾರತವು ಜಪಾನ್‌ನ ಪರಮಾಣು ಕಂಪನಿಗಳೊಂದಿಗೆ ಹೆಚ್ಚಿನ ಸಹಭಾಗಿತ್ವವನ್ನು ಎದುರು ನೋಡುತ್ತಿದೆ. ಭಾರತ ಮತ್ತು ಜಪಾನ್ ನಡುವಿನ ಒಪ್ಪಂದಕ್ಕೆ ಕೊನೆಗೂ 2016,ನವಂಬರ್‌ನಲ್ಲಿ ಅಂಕಿತ ಬಿದ್ದಿದ್ದು, 2017,ಜೂನ್‌ನಲ್ಲಿ ಜಪಾನ ಸಂಸತ್ತು ಅದಕ್ಕೆ ಹಸಿರು ನಿಶಾನೆ ತೋರಿಸಿದೆ.

ಪರಮಾಣು ತಂತ್ರಜ್ಞಾನವನ್ನು ಪೂರೈಸುವ ಅಮೆರಿಕದ ವೆಸ್ಟಿಂಗ್‌ಹೌಸ್ ಇಲೆಕ್ಟ್ರಿಕ್ ಕಂಪನಿಯು ಹಣಕಾಸು ಸಂಕಷ್ಟಗಳಿಗೆ ಗುರಿಯಾಗಿರುವುದರಿಂದ ಭಾರತವು ತನ್ನ ರಣನೀತಿಯನ್ನು ಬದಲಿಸಬೇಕಾಗಿದೆ. ಫುಕುಷಿಮಾ ದುರಂತದ ಬಳಿಕ ಜಪಾನ್‌ನಲ್ಲಿ ಮತ್ತು ಹಲವಾರು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಅವಕಾಶಗಳಿಲ್ಲದೆ ಸೊರಗುತ್ತಿರುವ ಹಲವಾರು ಜಪಾನಿ ಪರಮಾಣು ಕಂಪನಿಗಳಿಗೆ ಹೊಸ ಮಾರುಕಟ್ಟೆಗಳ ತೀವ್ರ ಅಗತ್ಯವಿದ್ದು, ಭಾರತವು ಅವುಗಳಿಗೆ ರತ್ನಗಂಬಳಿಯ ಸ್ವಾಗತವನ್ನು ನೀಡಲಿದೆ.

10 ಹೊಸ ವಿದ್ಯುತ್ ರಿಯಾಕ್ಟರ್‌ಗಳನ್ನು ನಿರ್ಮಿಸಲು ಭಾರತ ಸರಕಾರವು ಕಳೆದ ಮೇ ತಿಂಗಳಿನಲ್ಲಿ ತೆಗೆದುಕೊಂಡಿರುವ ನಿರ್ಧಾರವು ಜಪಾನಿ ಕಂಪನಿಗಳ ಪ್ರವೇಶಕ್ಕೆ ಅತ್ಯುತ್ತಮ ವೇದಿಕೆಯನ್ನು ಒದಗಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News